ವಿಶ್ವ ಅಥ್ಲೆಟಿಕ್ಸ್ ನ ಮಾಜಿ ಮುಖ್ಯಸ್ಥ ಲ್ಯಾಮೆನ್‌ಗೆ ಜೈಲು ಸಜೆ

Update: 2020-09-16 18:37 GMT

ಪ್ಯಾರಿಸ್: ರಶ್ಯದ ಡೋಪಿಂಗ್ ಹಗರಣದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ವಿಶ್ವ ಅಥ್ಲೆಟಿಕ್ಸ್ ಆಡಳಿತ ಮಂಡಳಿಯ ಮಾಜಿ ಮುಖ್ಯಸ್ಥ ಲ್ಯಾಮೈನ್ ಡಿಯಾಕ್ ಅವರಿಗೆ ಫ್ರಾನ್ಸ್‌ನಲ್ಲಿ ಬುಧವಾರ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 87ರ ಹರೆಯದ ಡಿಯಾಕ್ ಅವರು ಪರೀಕ್ಷಾ ಫಲಿತಾಂಶಗಳನ್ನು ಮುಚ್ಚಿಹಾಕಲು ಶಂಕಿತ ಡೋಪಿಂಗ್ ಕ್ರೀಡಾಪಟುಗಳಿಂದ ಲಂಚ ಸ್ವೀಕರಿಸಿದ್ದಾರೆ ಮತ್ತು ಅವರಿಗೆ 2012ರ ಲಂಡನ್ ಒಲಿಂಪಿಕ್ಸ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆಂದು ಆರೋಪಿಸಲಾಗಿದೆ.

 ಡಿಯಾಕ್ ಲಂಚ ಪಡೆದು 2012ರ ಸೆನೆಗಲ್ ಅಧ್ಯಕ್ಷೀಯ ಚುನಾವಣೆಯ ಮ್ಯಾಕಿ ಸಾಲ್ ಅವರ ಅಭಿಯಾನಕ್ಕೆ ಹಣಕಾಸಿನ ನೆರವು ನೀಡಿದ್ದರು ಎಂದು ಆರೋಪಿಸಲಾಗಿದೆ. ಡಿಯಾಕ್ ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯವು ದೃಢಪಡಿಸಿದೆ.ಡ್ರಗ್ಸ್ ಸೇವಿಸಿರುವ ಆರೋಪ ಹೊತ್ತಿರುವ ಕ್ರೀಡಾಪಟುಗಳಿಂದ ಡಿಯಾಕ್ ಒಟ್ಟು 3.45 ಮಿಲಿಯನ್ ಯುರೋಗಳಷ್ಟು ಲಂಚವನ್ನು ಪಡೆದಿದ್ದಾರೆಂದು ಆರೋಪಿಸಲಾಗಿದೆ. ನ್ಯಾಯಾಲಯವು ಡಿಯಾಕ್‌ಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು, ಅದರಲ್ಲಿ ಎರಡು ವರ್ಷಗಳನ್ನು ಅಮಾನತುಗೊಳಿಸಲಾಗಿದೆ. ಗರಿಷ್ಠ 500,000 ಯುರೋಗಳಷ್ಟು ದಂಡವನ್ನು ನ್ಯಾಯಾಲಯ ವಿಧಿಸಿದೆ.

ಡಿಯಾಕ್ ಒಂದೊಮ್ಮೆ ಕ್ರೀಡೆಯಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. 1999ರಿಂದ 2015 ರವರೆಗೆ ಇಂಟರ್‌ನ್ಯಾಶನಲ್ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ಸ್ (ಐಎಎಎಫ್)ನ್ನು ಮುನ್ನಡೆಸಿದ್ದರು. ಐಎಎಎಫ್‌ನ್ನು ಈಗ ವಿಶ್ವ ಅಥ್ಲೆಟಿಕ್ಸ್ ಎಂದು ಕರೆಯಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News