ಈ ರಾಜ್ಯದ ಪ್ರತಿ ಮೂವರಲ್ಲಿ ಒಬ್ಬರಿಗೆ ಕೋವಿಡ್ ಪ್ರತಿರೋಧ ಶಕ್ತಿ!

Update: 2020-09-17 03:57 GMT

ಹೊಸದಿಲ್ಲಿ, ಸೆ.17: ರಾಷ್ಟ್ರ ರಾಜಧಾನಿಯ ಪ್ರತಿ ಮೂವರಲ್ಲಿ ಒಬ್ಬರಿಗೆ ಕೋವಿಡ್ ಪ್ರತಿರೋಧ ಶಕ್ತಿ ಅಭಿವೃದ್ಧಿಯಾಗಿದೆ. 11 ಜಿಲ್ಲೆಗಳ 17 ಸಾವಿರ ಮಾದರಿಗಳನ್ನು ಸಂಗ್ರಹಿಸಿದ ವಿಶ್ಲೇಷಣೆ ನಡೆಸಿದ ಮೂರನೇ ಸೆರೋಲಾಜಿಕಲ್ ಸಮೀಕ್ಷೆಯಲ್ಲಿ ಈ ಅಂಶ ದೃಢಪಟ್ಟಿದೆ. ಈ ಅಧ್ಯಯನ ವರದಿಯ ಫಲಿತಾಂಶವನ್ನು ಅಧಿಕೃತವಾಗಿ ಮುಂದಿನ ವಾರ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ದಿಲ್ಲಿಯ ಅಂದಾಜು ಎರಡು ಕೋಟಿ ಮಂದಿಯ ಪೈಕಿ 66 ಲಕ್ಷ ಮಂದಿಗೆ ನೋವೆಲ್ ಕೊರೋನ ವೈರಸ್ ಸೋಂಕು ತಗಲಿ ಅವರು ಯಶಸ್ವಿಯಾಗಿ ಚೇತರಿಸಿಕೊಂಡಿದ್ದು, ಇವರಲ್ಲಿ ಪ್ರತಿರೋಧ ಶಕ್ತಿ (ಆ್ಯಂಟಿಬಾಡಿ) ಅಭಿವೃದ್ಧಿಯಾಗಿದೆ. ದೇಶದಲ್ಲಿ ಕೋವಿಡ್-19 ಸೋಂಕು ಹರಡಿದ ಬಳಿಕ ನಡೆದ ಅತಿದೊಡ್ಡ ಸಮೀಕ್ಷೆ ಇದಾಗಿದೆ.

ಆಗಸ್ಟ್ ಮೊದಲ ವಾರದಲ್ಲಿ ನಡೆಸಿದ ಎರಡನೇ ಸಮೀಕ್ಷೆಯಲ್ಲಿ ಶೇಕಡ 29.1ರಷ್ಟು ಮಂದಿಗೆ ಪ್ರತಿರೋಧ ಶಕ್ತಿ ಇರುವುದು ಪತ್ತೆಯಾಗಿತ್ತು. ಜುಲೈನಲ್ಲಿ ನಡೆದ ಮೊದಲ ಸಮೀಕ್ಷೆಯಲ್ಲಿ ಶೇಕಡ 23.4ರಷ್ಟು ಮಂದಿಗೆ ಪ್ರತಿರೋಧ ಶಕ್ತಿ ಕಂಡುಬಂದಿತ್ತು. ಎರಡು ಸಮೀಕ್ಷೆಗಳಲ್ಲಿ ಕ್ರಮವಾಗಿ 15 ಸಾವಿರ ಹಾಗೂ 21 ಸಾವಿರ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿಯೊಬ್ಬರು, "ಪ್ರತಿರೋಧ ಶಕ್ತಿ ಇರುವವರು ಸದ್ಯ ಸೋಂಕಿಗೆ ಗುರಿಯಾಗಿಲ್ಲ. ಅವರು ಕೋವಿಡ್-19ನಿಂದ ಗುಣಮುಖರಾಗಿದ್ದಾರೆ. ಬಹಳಷ್ಟು ಮಂದಿಗೆ ಸೋಂಕು ತಗಲಿರುವುದು ಕೂಡಾ ತಿಳಿಯದೇ ಯಶಸ್ವಿಯಾಗಿ ಚೇತರಿಸಿಕೊಂಡಿದ್ದಾರೆ" ಎಂದು ವಿವರಿಸಿದ್ದಾರೆ.

ಮಾದರಿಗಳನ್ನು ಮೌಲಾನ ಆಝಾದ್ ವೈದ್ಯಕೀಯ ಕಾಲೇಜಿನಲ್ಲಿ ವಿಶ್ಲೇಷಿಸಲಾಗಿದೆ. ಈಗ ಅರ್ಧಷ್ಟು ಮಾದರಿಗಳ ವಿಶ್ಲೇಷಣೆ ಮಾತ್ರ ಪೂರ್ಣಗೊಂಡಿದ್ದು, ಎಲ್ಲ ಮಾದರಿಗಳನ್ನು ವಿಶ್ಲೇಷಿಸಿದಾಗ ಈ ಶೇಕಡಾವಾರು ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಇದು ಸರ್ಕಾರಕ್ಕೆ ಕೋವಿಡ್-19 ಸ್ಥಿತಿಯ ಸೂಕ್ಷ್ಮ ಅವಲೋಕನಕ್ಕೆ ನೆರವಾಗಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News