ಲಡಾಖ್‍ ನಲ್ಲಿ ಚೀನಾ ಭಾರತದ 38,000 ಚದರ ಕಿ.ಮೀ. ಭೂಭಾಗವನ್ನು ಈಗಲೂ ಅತಿಕ್ರಮಿಸಿದೆ

Update: 2020-09-17 15:00 GMT

ಹೊಸದಿಲ್ಲಿ, ಸೆ.17: ಲಡಾಖ್‌ನಲ್ಲಿ ಚೀನಾ ಸುಮಾರು 38,000 ಚದರ ಕಿ.ಮೀ ವ್ಯಾಪ್ತಿಯ ಭೂಮಿಯ ಅಕ್ರಮ ಅತಿಕ್ರಮಣವನ್ನು ಮುಂದುವರಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿಗೆ ತಿಳಿಸಿದ್ದಾರೆ.

ಲಡಾಖ್ ಕೇಂದ್ರಾಳಿತ ಪ್ರದೇಶದಲ್ಲಿ ಚೀನಾ ಸುಮಾರು 38,000 ಚದರ ಕಿ.ಮೀ ಭೂಮಿಯ ಮೇಲಿನ ಅಕ್ರಮ ಅತಿಕ್ರಮಣವನ್ನು ಮುಂದುವರಿಸಿದೆ. ಜೊತೆಗೆ, 1963ರ ಚೀನಾ-ಪಾಕಿಸ್ತಾನ ಗಡಿ ಒಪ್ಪಂದ ಎಂದು ಹೇಳಲಾದ ಪ್ರಕ್ರಿಯೆಯಡಿ ಪಾಕಿಸ್ತಾನವು ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿರುವ 5,180 ಚದರ ಕಿಮೀ ಭೂಮಿಯನ್ನು ಚೀನಾಕ್ಕೆ ಬಿಟ್ಟುಕೊಟ್ಟಿದೆ. ಅಲ್ಲದೆ ಅರುಣಾಚಲ ಪ್ರದೇಶದಲ್ಲಿ ಭಾರತ-ಚೀನಾ ಗಡಿಯಲ್ಲಿ ಭಾರತಕ್ಕೆ ಸೇರಿದ ಸುಮಾರು 90,000 ಚದರ ಕಿಮೀ ಪ್ರದೇಶದ ಮೇಲೆ ಹಕ್ಕು ಸಾಧಿಸುತ್ತಿದೆ ಎಂದು ರಾಜನಾಥ್ ಸಿಂಗ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ವಾಸ್ತವಿಕ ನಿಯಂತ್ರಣ ರೇಖೆಯನ್ನು ಒಪ್ಪಿ ಗೌರವಿಸುವುದು ಗಡಿಭಾಗದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲು ಮೂಲಾಧಾರವಾಗಿದೆ. ನಮ್ಮ ಸಶಸ್ತ್ರ ಪಡೆಗಳು ಇದಕ್ಕೆ ಬದ್ಧವಾಗಿದ್ದರೂ ಚೀನಾದ ಸೇನೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಚೀನಾ ಸೇನೆಯ ಈ ನಡೆ ಉಭಯ ದೇಶಗಳ ನಡುವಿನ ಹಲವು ದ್ವಿಪಕ್ಷೀಯ ಒಪ್ಪಂದಗಳ ಕಡೆಗಣನೆಯಾಗಿದೆ. ಗಡಿ ಭಾಗದಲ್ಲಿ ಚೀನಾ ಸೇನೆಯನ್ನು ಜಮಾಯಿಸಿರುವುದು 1993 ಮತ್ತು 1996ರ ಒಪ್ಪಂದದ ಉಲ್ಲಂಘನೆಯಾಗಿದೆ. ಪೂರ್ವ ಲಡಾಖ್‌ನ ಗೋಗ್ರ, ಕೋಂಗ್ಕಾ ಲಾ, ಪಾಂಗ್ಯಾಂಗ್ ಸರೋವರದ ದಕ್ಷಿಣ ಮತ್ತು ಉತ್ತರ ದಂಡೆ ಸಹಿತ ಹಲವು ಪ್ರದೇಶಗಳಲ್ಲಿ ಬಿಕ್ಕಟ್ಟು ನೆಲೆಸಿದೆ ಎಂದು ಸಿಂಗ್ ಹೇಳಿದರು.

ಸದನದ ಸದಸ್ಯರು ಸಶಸ್ತ್ರ ಪಡೆಗಳೊಂದಿಗೆ ಒಗ್ಗಟ್ಟು ಪ್ರದರ್ಶಿಸಿದರು. ರಕ್ಷಣಾ ಸಚಿವರ ಹೇಳಿಕೆಗೆ ಸ್ಪಷ್ಟನೆ ಬಯಸಿದ ಕಾಂಗ್ರೆಸ್ ಸಂಸದ ಆನಂದ್ ಶರ್ಮ, ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಈ ಹಿಂದಿನ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಪಟ್ಟು ಹಿಡಿಯಲು ಭಾರತಕ್ಕೆ ಸಾಧ್ಯವಾಗಿಲ್ಲವೇ ಎಂದು ಪ್ರಶ್ನಿಸಿದರು. ಈ ಸಂದರ್ಭ ಮಾತನಾಡಿದ ಸದನದ ಅಧ್ಯಕ್ಷ ವೆಂಕಯ್ಯ ನಾಯ್ಡು, ರಾಜಕೀಯ ಮುಖಂಡರನ್ನು ವಿಶ್ವಾಸಕ್ಕೆ ಪಡೆದುಕೊಳ್ಳುವಂತೆ ಮತ್ತು ವಿಪಕ್ಷಗಳ ಆಯ್ದ ಸದಸ್ಯರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಅವರ ಪ್ರಶ್ನೆಗೆ ಉತ್ತರಿಸುವಂತೆ ರಕ್ಷಣಾ ಸಚಿವರಿಗೆ ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News