ನವಾಲ್ನಿ ಹೊಟೇಲ್ ಕೋಣೆಯ ನೀರಿನ ಬಾಟಲಿಯಲ್ಲಿ ರಾಸಾಯನಿಕ ಪತ್ತೆ: ಸಿಬ್ಬಂದಿ ಹೇಳಿಕೆ

Update: 2020-09-17 17:30 GMT

ನವಾಲ್ನಿ ಹೊಟೇಲ್ ಕೋಣೆಯ ನೀರಿನ ಬಾಟಲಿಯಲ್ಲಿ ರಾಸಾಯನಿಕ ಪತ್ತೆ:  ಸಿಬ್ಬಂದಿ ಹೇಳಿಕೆ

ಮಾಸ್ಕೋ (ರಶ್ಯ), ಸೆ. 17: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಕಟು ಟೀಕಾಕಾರ ಹಾಗೂ ದೇಶದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಯ ಮೇಲೆ ಪ್ರಯೋಗಿಸಲಾದ ರಾಸಾಯನಿಕವು ಸೈಬೀರಿಯದ ಟೊಮ್‌ಸ್ಕ್ ನಗರದಲ್ಲಿ ಅವರು ತಂಗಿದ್ದ ಹೊಟೇಲ್ ಕೋಣೆಯಿಂದ ತರಲಾದ ಖಾಲಿ ನೀರಿನ ಬಾಟಲಿಯಲ್ಲಿ ಪತ್ತೆಯಾಗಿದೆ ಎಂದು ಅವರ ಸಿಬ್ಬಂದಿ ಗುರುವಾರ ಹೇಳಿದ್ದಾರೆ. ಹಾಗಾಗಿ, ಅವರ ಮೇಲೆ ಹೊಟೇಲ್ ಕೋಣೆಯಲ್ಲೇ ರಾಸಾಯನಿಕ ಪ್ರಯೋಗವಾಗಿದೆ, ಈ ಹಿಂದೆ ಭಾವಿಸಿರುವಂತೆ ವಿಮಾನ ನಿಲ್ದಾಣದಲ್ಲಿ ಅಲ್ಲ ಎಂದು ಅದು ತಿಳಿಸಿದೆ.

ಕಳೆದ ತಿಂಗಳು ಸೈಬೀರಿಯದಿಂದ ಮಾಸ್ಕೋಗೆ ಹೋಗುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನವಾಲ್ನಿ ಗಂಭೀರವಾಗಿ ಅಸ್ವಸ್ಥರಾಗಿದ್ದರು. ಆರಂಭದಲ್ಲಿ ಸೈಬೀರಿಯದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದ ಬಳಿಕ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜರ್ಮನಿ ರಾಜಧಾನಿ ಬರ್ಲಿನ್‌ಗೆ ವಿಮಾನ ಆ್ಯಂಬುಲೆನ್ಸ್‌ನಲ್ಲಿ ಸಾಗಿಸಲಾಗಿತ್ತು. ಅಲ್ಲಿ ಅವರು ನಿಧಾನವಾಗಿ ಚೇತರಿಸುತ್ತಿದ್ದಾರೆ.

ಅವರ ಮೇಲೆ ನೊವಿಚೊಕ್ ಎಂಬ ನರ್ವ್ ಏಜಂಟ್ ರಾಸಾಯನಿಕವನ್ನು ಪ್ರಯೋಗಿಸಲಾಗಿದೆ ಎಂದು ಜರ್ಮನಿ ಆರೋಪಿಸಿದೆ. ಆದರೆ, ಅವರಿಗೆ ವಿಷಪ್ರಾಶನವಾಗಿರುವುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ರಶ್ಯ ಹೇಳಿದೆ.

ಆಗಸ್ಟ್ 20ರಂದು, ಸಂಶಯಾಸ್ಪದ ಸನ್ನಿವೇಶಗಳ ಹಿನ್ನೆಲೆಯಲ್ಲಿ ನವಾಲ್ನಿ ಪ್ರಜ್ಞಾಶೂನ್ಯರಾದ ಒಂದು ಗಂಟೆ ಬಳಿಕ, ಟೊಮ್‌ಸ್ಕ್ ನಗರದಲ್ಲಿರುವ ಅವರ ಹೊಟೇಲ್ ಕೋಣೆಯಲ್ಲಿ ಅವರ ಸಿಬ್ಬಂದಿ ಶೋಧ ನಡೆಸುತ್ತಿರುವುದನ್ನು ತೋರಿಸುವ ವೀಡಿಯೊವೊಂದನ್ನು ನವಾಲ್ನಿಯ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾಕಲಾಗಿದೆ.

‘‘ಕಲ್ಪನೆಯಲ್ಲಾದರೂ ಉಪಯೋಗವಾಗಬಹುದೆಂದು ಭಾವಿಸಲಾದ ಎಲ್ಲ ವಸ್ತುಗಳನ್ನು ಸಂಗ್ರಹಿಸಿ ಜರ್ಮನಿಯಲ್ಲಿರುವ ವೈದ್ಯರಿಗೆ ಹಸ್ತಾಂತರಿಸಲು ನಿರ್ಧರಿಸಲಾಗಿತ್ತು. ಈ ಪ್ರಕರಣದ ತನಿಖೆಯನ್ನು ರಶ್ಯದಲ್ಲಿ ನಡೆಸಲಾಗುವುದಿಲ್ಲ ಎನ್ನವುದು ನಮಗೆ ಮೊದಲೇ ಗೊತ್ತಿತ್ತು’’ ಎಂದು ಇನ್‌ಸ್ಟಾಗ್ರಾಮ್ ಸಂದೇಶ ಹೇಳಿದೆ.

‘‘ಟೊಮ್‌ಸ್ಕ್‌ನಲ್ಲಿರುವ ಹೊಟೇಲ್ ಕೋಣೆಯಿಂದ ಸಂಗ್ರಹಿಸಲಾಗಿರುವ ನೀರಿನ ಬಾಟಲಿಯಲ್ಲಿ ನೊವಿಚೊಕ್ ರಾಸಾಯನಿಕದ ಅಂಶಗಳಿರುವುದನ್ನು ಎರಡು ವಾರಗಳ ಬಳಿಕ ಜರ್ಮನಿಯ ಪ್ರಯೋಗಾಲಯವೊಂದು ಪತ್ತೆಹಚ್ಚಿದೆ’’ ಎಂದಿದೆ.

ರಶ್ಯ ಬೇಹುಗಾರರಿಂದ ವಿಷಪ್ರಾಶನ: ಬ್ರಿಟನ್

ಸೋವಿಯತ್ ಕಾಲದಲ್ಲಿ ಅಭಿವೃದ್ಧಿಪಡಿಸಲಾದ ರಾಸಾಯನಿಕ ಅಸ್ತ್ರ ನೊವಿಚೊಕ್ ಮೂಲಕ ರಶ್ಯದ ಗುಪ್ತಚರ ಸಂಸ್ಥೆಗಳು ದೇಶದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಯ ಮೇಲೆ ಆಕ್ರಮಣ ಮಾಡಿರುವುದು ಬಹುತೇಕ ಖಚಿತವಾಗಿದೆ ಎಂದು ಬ್ರಿಟನ್ ಬುಧವಾರ ಹೇಳಿದೆ.

ರಾಸಾಯನಿಕ ಅಸ್ತ್ರದ ಬಳಕೆಯು ಅಸ್ವೀಕಾರಾರ್ಹವಾಗಿದ್ದು, ನವಾಲ್ನಿಯ ವಿಷಪ್ರಾಶನದ ಬಗ್ಗೆ ರಶ್ಯ ವಿವರಣೆ ನೀಡಬೇಕಾಗಿದೆ ಎಂದು ವಾಶಿಂಗ್ಟನ್‌ನಲ್ಲಿ ಅವೆುರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ರಿಟನ್ ವಿದೇಶ ಕಾರ್ಯದರ್ಶಿ ಡಾಮ್ನಿಕ್ ರಾಬ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News