ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಕುರಿತು ಚರ್ಚಿಸಲು ಪ್ರಧಾನಿ, ಕೇಂದ್ರ ಸಚಿವರ ಭೇಟಿ: ಸಿಎಂ ಯಡಿಯೂರಪ್ಪ

Update: 2020-09-18 12:51 GMT

ಹೊಸದಿಲ್ಲಿ, ಸೆ.18: ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಕುರಿತು ಚರ್ಚಿಸಲು ತಾವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರದ ಹಲವು ಸಚಿವರನ್ನು ಭೇಟಿ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಶುಕ್ರವಾರ ಹೊಸದಿಲ್ಲಿಯಲ್ಲಿ 120 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಜ್ಯದ ರಾಯಭಾರಿ ಕಚೇರಿ ಎಂದೇ ಬಣ್ಣಿಸಲಾಗುವ ಕರ್ನಾಟಕ ಭವನ-1 ‘ಕಾವೇರಿ’ ಕಟ್ಟಡದ ಪುನರ್ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಎರಡು ತಳ ಮಹಡಿಗಳೂ, ನೆಲ ಮಹಡಿ ಹಾಗೂ ಆರು ಮಹಡಿ ಒಳಗೊಂಡಂತೆ ಒಟ್ಟು ಒಂಭತ್ತು ಮಹಡಿಗಳ ಈ ಕಟ್ಟಡವನ್ನು ನಿರ್ಮಾಣಕ್ಕೆ ಬಾಲಾಜಿ ಕೃಪಾ ಪ್ರಾಜೆಕ್ಸ್ ಪ್ರೈವೇಟ್ ಲಿಮಿಟೆಡ್ ಅವರಿಗೆ ವಹಿಸಿದ್ದು, ಮುಂದಿನ 24 ತಿಂಗಳಲ್ಲಿ ಕಟ್ಟಡದ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಅವರು ಹೇಳಿದರು.

ಆರೋಪ ತಳ್ಳಿಹಾಕಿದ ಸಿಎಂ: ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಸೂಪರ್ ಸಿಎಂ ಎಂದು ಬಣ್ಣಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಪವನ್ನು ತಳ್ಳಿ ಹಾಕಿದ ಮುಖ್ಯಮಂತ್ರಿ ಯಡಿಯೂರಪ್ಪ, ವಿಜಯೇಂದ್ರ ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದಲ್ಲಿ ಉಪಾಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸುವಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಹೊರತು, ರಾಜ್ಯ ಸರಕಾರದ ಯಾವುದೇ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುತಿಲ್ಲ ಎಂದು ಸ್ಪಷ್ಟಪಡಿಸಿದರು.

ಊಹಾಪೋಹ ಬೇಡ: ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ತಮ್ಮ ನಡುವಿನ ಇತ್ತೀಚಿನ ಭೇಟಿ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಪ್ರತಿಪಕ್ಷದ ನಾಯಕರಲ್ಲೊಬ್ಬರು. ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಲು ಆಗಮಿಸಿದ್ದರು. ಇಂತಹ ವಿಷಯಗಳಲ್ಲಿ ಅನಗತ್ಯ ಊಹಾಪೋಹ ಬೇಡ ಎಂದು ಉತ್ತರಿಸಿದರು.

‘ಕಾವೇರಿ’ಯ ಹಿನ್ನೆಲೆ: ಹೊಸದಿಲ್ಲಿಯ ಚಾಣಕ್ಯಪುರಿಯಲ್ಲಿರುವ ಕೌಟಿಲ್ಯ ಮಾರ್ಗದ ಸಂಖ್ಯೆ: 10ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಪರಿಕಲ್ಪನೆಯಲ್ಲಿ ರಾಜ್ಯದ ಗಣ್ಯಾತಿಗಣ್ಯರ ವಾಸ್ತವ್ಯಕ್ಕೆ ಎಂದೇ ಕರ್ನಾಟಕ ಭವನ ಕಟ್ಟಡವು 1967ರಲ್ಲಿ ನಿರ್ಮಾಣಗೊಂಡಿತ್ತು. ಐವತ್ತು ವರ್ಷಗಳಿಗೂ ಹೆಚ್ಚು ಕಾಲದ ಈ ಕಟ್ಟಡದಲ್ಲಿ ಕಾಲಕಾಲಕ್ಕೆ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ.

ಹವಾಮಾನ ವೈಪರೀತ್ಯಗಳಿಂದ ಶಿಥಿಲಗೊಳ್ಳುತ್ತಿರುವ ಕಟ್ಟಡವನ್ನು ಕೆಡವಿ, ಅದೇ ಸ್ಥಳದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸುವುದು ಸೂಕ್ತ ಎಂದು 2018ರ ಫೆ.1ರಂದು ಸಿವಿಲ್ ಏಡ್ ಟೆಕ್ನೋ ಕ್ಲಿನಿಕ್ ತಾಂತ್ರಿಕ ಸಂಸ್ಥೆ ನೀಡಿದ ತಾಂತ್ರಿಕ ಶಿಫಾರಸ್ಸನ್ನು ಅಂಗೀಕರಿಸಿದ ರಾಜ್ಯ ಸರಕಾರ ಕಟ್ಟಡ ಪುನರ್ ನಿರ್ಮಾಣ ಕಾಮಗಾರಿಗಳಿಗೆ 87 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ಹಾಗೂ 81 ಕೋಟಿ ರೂ.ತಾಂತ್ರಿಕ ಮಂಜೂರಾತಿ ನೀಡಿದೆ. ಕಟ್ಟಡದ ನಿರ್ಮಾಣಕ್ಕೆ ಬಾಲಾಜಿ ಕೃಪಾ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಆಯ್ಕೆಯಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಮತ್ತೆ ಕಾವೇರಿ ಕಟ್ಟಡವು ಕೌಟಿಲ್ಯ ಮಾರ್ಗದ ಹೆಗ್ಗುರುತಾಗಿ ಮತ್ತೆ ಕಂಗೊಳಿಸಲಿದೆ.

ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ, ಕೇಂದ್ರ ಸಂಸದೀಯ ವ್ಯಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ಅಣ್ಣಾ ಸಾಹೇಬ್ ಜೊಲ್ಲೆ, ಪಿ.ಸಿ.ಗದ್ದೀಗೌಡರ್, ಡಾ.ಉಮೇಶ್ ಜಾಧವ್, ಭಗವಂತ ಖೂಬಾ, ಕರಡಿ ಸಂಗಣ್ಣ, ವೈ.ದೇವೇಂದ್ರಪ್ಪ, ಜಿ.ಎಂ.ಸಿದ್ದೇಶ್ವರ್, ಬಿ.ವೈ.ರಾಘವೇಂದ್ರ ಸೇರಿದಂತೆ ಇತರ ಸಂಸದರು, ಹೊಸದಿಲ್ಲಿಯಲ್ಲಿನ ರಾಜ್ಯ ಸರಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಸೇರಿದಂತೆರ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News