ಜೆಲ್ಲಿ ರೂಪದ ಡ್ರಗ್ಸ್ ಮಾರಾಟ ಜಾಲ ಭೇದಿಸಿದ ಸಿಸಿಬಿ; ಇಬ್ಬರ ಬಂಧನ

Update: 2020-09-18 13:26 GMT

ಬೆಂಗಳೂರು, ಸೆ.18: ಮಕ್ಕಳನ್ನು ಹೆಚ್ಚಾಗಿ ಆಕರ್ಷಿಸುವ ಹಾಗೂ ಹಾನಿಕಾರಕ ಟಿಎಚ್‍ಸಿ ಜೆಲ್ಲಿ, ಎಲ್‍ಎಸ್‍ಡಿ ಪೇಪರ್, ಎಕ್ಸ್‍ಟಿಸಿ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಭೇದಿಸಿರುವ ಸಿಸಿಬಿ ಪೊಲೀಸರು, ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊತ್ತನೂರಿನ ನಿಖೋಲಸ್(21) ಹಾಗೂ ಜೆ.ಪಿ.ನಗರ 2ನೇ ಹಂತದ ಇರ್ಫಾನ್ ಶೇಖ್(29) ಬಂಧಿತ ಆರೋಪಿಗಳೆಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಸೆ.16ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಎಂ.ಜಿ.ರಸ್ತೆ, ಆರ್‍ಎಸ್‍ಐ ಕಾಂಪೌಂಡ್ ಬಳಿ ಇಬ್ಬರು ವ್ಯಕ್ತಿಗಳು ಕಾರ್ ನಲ್ಲಿ ಮಾದಕ ವಸ್ತುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು, ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತರಿಂದ ಒಟ್ಟು 4 ಲಕ್ಷ ರೂ. ಮೌಲ್ಯದ ಟಿಎಚ್‍ಸಿ (50 ಜೆಲ್ಲಿ), 34 ಎಕ್ಸ್‍ಟಿಸಿ ಪಿಲ್ಸ್ ಗಳು ಮತ್ತು 27 ಎಲ್‍ಎಸ್‍ಡಿ ಸ್ಟ್ರಿಪ್ಸ್ ಗಳು, 2 ಮೊಬೈಲ್ ಫೋನ್‍ಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಪ್ರಾಥಮಿಕ ವಿಚಾರಣೆ ನಡಸಿದಾಗ, ಸಹಚರನಾದ ಅಶ್ವಿನ್ ಎಂಬವನೊಂದಿಗೆ ಸಂಪರ್ಕ ಇಟ್ಟುಕೊಂಡು ಅವನಿಂದ ಕಡಿಮೆ ಬೆಲೆಗೆ ಸಗಟು ರೂಪದಲ್ಲಿ ಡ್ರಗ್ಸ್ ಖರೀದಿ ಮಾಡಿ ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News