ಲಾಕ್‌ಡೌನ್ ಸಂದರ್ಭದ ಶ್ರಮಿಕ್ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ 97 ವಲಸೆ ಕಾರ್ಮಿಕರು ಮೃತ್ಯು: ಕೇಂದ್ರ

Update: 2020-09-19 14:04 GMT

ಹೊಸದಿಲ್ಲಿ,ಸೆ.19: ಕೊರೋನ ವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಶ್ರಮಿಕ್ ವಿಶೇಷ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ವಲಸೆ ಕಾರ್ಮಿಕರು ಮೃತಪಟ್ಟಿದ್ದನ್ನು ಸರಕಾರವು ಮೊದಲ ಬಾರಿಗೆ ಒಪ್ಪಿಕೊಂಡಿದೆ. ರಾಜ್ಯಸಭೆಯಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯಾನ್ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ರಾಜ್ಯ ಪೊಲೀಸರು ಒದಗಿಸಿರುವ ಮಾಹಿತಿಗಳಂತೆ ಸೆ.9,2020ರವರೆಗೆ ಈ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ 97 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

 ರಾಜ್ಯಗಳ ಪೊಲೀಸರು ಸಿಆರ್‌ಪಿಸಿಯ ಕಲಂ 174ರಡಿ ಅಸಹಜ ಸಾವುಗಳ ಪ್ರಕರಣಗಳನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಪ್ರಕ್ರಿಯೆಯನ್ನು ಅನುಸರಿಸುತ್ತಾರೆ. ಒಟ್ಟು 97 ಪ್ರಕರಣಗಳ ಪೈಕಿ 89 ಪ್ರಕರಣಗಳಲ್ಲಿ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಈವರೆಗೆ ಈ ಪೈಕಿ 51 ಮರಣೋತ್ತರ ಪರೀಕ್ಷೆ ವರದಿಗಳನ್ನು ಆಯಾ ರಾಜ್ಯಗಳ ಪೊಲೀಸರು ಸ್ವೀಕರಿಸಿದ್ದು,ಹೃದಯ ಸ್ತಂಭನ, ಹೃದಯ ರೋಗ, ಮಿದುಳಿನ ರಕ್ತಸ್ರಾವ, ಮೊದಲೇ ಅಸ್ತಿತ್ವದಲ್ಲಿದ್ದ ದೀರ್ಘಕಾಲಿಕ ರೋಗಗಳು, ದೀರ್ಘಕಾಲಿಕ ಶ್ವಾಸಕೋಶ ಮತ್ತು ಯಕೃತ್ತು ಕಾಯಿಲೆಗಳು ಇತ್ಯಾದಿಗಳನ್ನು ಸಾವಿಗೆ ಕಾರಣವೆಂದು ಉಲ್ಲೇಖಿಸಲಾಗಿದೆ ಎಂದು ಗೋಯಲ್ ತಿಳಿಸಿದರು.

ಮಾ.25ರಿಂದ ಜಾರಿಗೊಂಡಿದ್ದ 68 ದಿನಗಳ ಲಾಕ್‌ಡೌನ್ ಅವಧಿಯಲ್ಲಿ ಸಾವನ್ನಪ್ಪಿದ ವಲಸೆ ಕಾರ್ಮಿಕರ ಕುರಿತು ಯಾವುದೇ ದತ್ತಾಂಶಗಳು ಲಭ್ಯವಿಲ್ಲ ಎಂದು ಈ ವಾರದ ಪೂರ್ವಾರ್ಧದಲ್ಲಿ ಕಾರ್ಮಿಕ ಸಚಿವಾಲಯವು ಸಂಸತ್ತಿನಲ್ಲಿ ತಿಳಿಸಿದ ಬಳಿಕ ಸರಕಾರವು ತೀವ್ರಟೀಕೆಗಳಿಗೆ ಗುರಿಯಾಗಿತ್ತು.

ಲಾಕ್‌ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ವಾಪಸ್ ಸಾಗಿಸಲು ಶ್ರಮಿಕ್ ವಿಶೇಷ ರೈಲುಗಳು ಮೇ 1ರಿಂದ ಕಾರ್ಯಾಚರಣೆ ಆರಂಭಿಸಿದ್ದವು. ಆ.31ರವರೆಗೆ ಒಟ್ಟು 4,621 ರೈಲುಗಳು ಕಾರ್ಯಾಚರಿಸಿದ್ದು,63,19,000 ಜನರು ತಮ್ಮ ತವರು ರಾಜ್ಯಗಳಿಗೆ ಮರಳಿದ್ದರು.

ರೈಲ್ವೆ ಆವರಣಗಳು ಮತ್ತು ಚಲಿಸುವ ರೈಲುಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಜವಾಬ್ದಾರಿಯು ಆಯಾ ರಾಜ್ಯಗಳಿಗೆ ಸೇರಿದ್ದು,ಸರಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ)/ಜಿಲ್ಲಾ ಪೊಲೀಸರ ಮೂಲಕ ಇದನ್ನು ನಿರ್ವಹಿಸಲಾಗುತ್ತದೆ. ಇವೆರಡು ಪಡೆಗಳಿಗೆ ಪೂರಕವಾಗಿ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯು ಕಾರ್ಯಾಚರಿಸುತ್ತದೆ ಎಂದು ಗೋಯಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News