2009ರ ಗೋವಾ ಸ್ಫೋಟ ಪ್ರಕರಣ: ಆರು ಆರೋಪಿಗಳ ಬಿಡುಗಡೆಯನ್ನು ಎತ್ತಿಹಿಡಿದ ಬಾಂಬೆ ಹೈಕೋರ್ಟ್

Update: 2020-09-19 15:02 GMT
ಫೈಲ್ ಚಿತ್ರ

ಪಣಜಿ,ಸೆ.19: ದಕ್ಷಿಣ ಗೋವಾದ ಮಡಗಾಂವ್‌ನಲ್ಲಿ 2009ರ ದೀಪಾವಳಿಗೆ ಮುನ್ನಾ ದಿನ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರು ಆರೋಪಿಗಳ ಬಿಡುಗಡೆಯನ್ನು ಬಾಂಬೆ ಉಚ್ಚ ನ್ಯಾಯಾಲಯದ ಗೋವಾ ಪೀಠವು ಎತ್ತಿ ಹಿಡಿದಿದೆ. ಆರೋಪಿಗಳು ಬಾಂಬ್‌ನ್ನು ಜೋಡಿಸಿ ಅದನ್ನು ಮಡಗಾಂವ್‌ಗೆ ಸಾಗಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ಗುರಿ ಸಾಧನೆಗೆ ಮೊದಲೇ ಬಾಂಬ್ ಸ್ಫೋಟಿಸಿದ್ದು,ಇಬ್ಬರು ಮೃತಪಟ್ಟಿದ್ದರು.

 ದೀಪಾವಳಿಯ ಮುನ್ನಾ ದಿನವಾಗಿದ್ದ 2009,ಅ.16ರಂದು ನರಕಾಸುರ ಸ್ಪರ್ಧೆಯನ್ನು ಆಯೋಜಿಸಿದ್ದ ಸ್ಥಳದಲ್ಲಿರಿಸಲು ಮಲ್ಗೊಂಡ ಪಾಟೀಲ ಮತ್ತು ಯೋಗೇಶ ನಾಯ್ಕ್ ಈ ಬಾಂಬ್‌ನ್ನು ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದರು. ಮಡಗಾಂವ್‌ನ ಗ್ರೇಸ್ ಚರ್ಚ್ ಬಳಿ ತಲುಪಿದಾಗ ಬಾಂಬ್ ಸ್ಫೋಟಗೊಂಡು ಇಬ್ಬರೂ ಮೃತಪಟ್ಟಿದ್ದರು. ಈ ಘಟನೆಯಲ್ಲಿ ಇತರ ಯಾರಿಗೂ ಗಾಯವಾಗಿರಲಿಲ್ಲ.

ಪಾಟೀಲ ಮತ್ತು ನಾಯ್ಕ ಅವರೊಂದಿಗೆ ವಿನಯ ತಳೇಕರ, ಧನಂಜಯ ಅಷ್ಠೇಕರ, ಪ್ರಶಾಂತ ಅಷ್ಠೇಕರ್, ವಿನಾಯಕ ಪಾಟೀಲ, ಪ್ರಶಾಂತ ಜುವೆಕರ್ ಮತ್ತು ದಿಲೀಪ್ ಮಜಗಾಂವಕರ್ ಅವರನ್ನು ಆರೋಪಿಗಳೆಂದು ಎನ್‌ಐಎ ಹೆಸರಿಸಿತ್ತು. ಎಲ್ಲರೂ ಮಹಾರಾಷ್ಟ್ರದ ನಿವಾಸಿಗಳಾಗಿದ್ದು ಸನಾತನ ಸಂಸ್ಥಾ ಜೊತೆ ಸಂಬಂಧ ಹೊಂದಿದ್ದರು. ಗೋವಾ ಪೊಲೀಸ್ ಕ್ರೈಂ ಬ್ರಾಂಚ್ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಬಳಿಕ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು.

ವಿಶೇಷ ನ್ಯಾಯಾಧೀಶರು ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಎನ್‌ಐಎ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಇಬ್ಬರು ಮೃತರು ಸೇರಿದಂತೆ ಒಟ್ಟು 11 ಜನರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಮೂವರು ಆರೋಪಿಗಳು ಈಗಲೂ ತಲೆಮರೆಸಿಕೊಂಡಿದ್ದು,ಆರು ಆರೋಪಿಗಳು ಮಾತ್ರ ವಿಚಾರಣೆಯನ್ನು ಎದುರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News