ಕಾಶ್ಮೀರದಲ್ಲಿ ‘ಅಫ್‌ಸ್ಪಾ’ ಹಿಂದೆಗೆಯಲು ಸಾಮಾಜಿಕ ಕಾರ್ಯಕರ್ತರ ಆಗ್ರಹ

Update: 2020-09-19 15:08 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಸೆ.19: ದ.ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಜು.18ರಂದು ಮೂವರು ವ್ಯಕ್ತಿಗಳ ಹತ್ಯೆಯಲ್ಲಿ ಯೋಧರು ವಿವಾದಾಸ್ಪದ ಸಶಸ್ತ್ರ ಪಡೆಗಳ ವಿಶೇಷಾಧಿಕಾರಗಳ ಕಾಯ್ದೆ (ಅಫ್‌ಸ್ಪಾ)ಯಡಿ ಕಾನೂನಿನ ಮಿತಿಯನ್ನು ಮೀರಿದ್ದನ್ನು ಸೇನೆಯು ಒಪ್ಪಿಕೊಂಡಿದ್ದು, ಅಫ್‌ಸ್ಪಾವನ್ನು ಹಿಂದೆಗೆದುಕೊಳ್ಳುವಂತೆ ಮಾನವ ಹಕ್ಕು ಸಂಘಟನೆಗಳು ಆಗ್ರಹಿಸಿವೆ.

‘ಜುಲೈನಲ್ಲಿ ಶೋಪಿಯಾನ್‌ನಲ್ಲಿ ಮೂವರು ಕಾಶ್ಮೀರಿಗಳ ಕಾನೂನುಬಾಹಿರ ಹತ್ಯೆಯ ಕುರಿತು ವಿಚಾರಣೆಯ ಬಳಿಕ ಸೇನೆಯು ಶಿಸ್ತು ಕ್ರಮಗಳಿಗೆ ಆದೇಶಿಸಿದೆ. ಆದರೆ ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಕಾನೂನು ಕ್ರಮಗಳಿಂದ ಯೋಧರು ರಕ್ಷಣೆಯನ್ನು ಹೊಂದಿದ್ದಾರೆ. ಪತ್ರಿಬಾಲ್ ಮತ್ತು ಮಚಿಲ್ ಎನ್‌ಕೌಂಟರ್‌ಗಳನ್ನು ನೆನಪಿಸಿಕೊಳ್ಳಿ ’ ಎಂದು ಹ್ಯೂಮನ್ ರೈಟ್ಸ್ ವಾಚ್ ಸೌಥ್ ಏಶ್ಯಾದ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಟ್ವೀಟಿಸಿದ್ದರೆ, ‘ಸೇನೆಯ ಕ್ರಮವು ಟೀಕೆಗಳನ್ನು ಅಡಗಿಸಲು ಮತ್ತು ಮುಜುಗರವನ್ನು ತಪ್ಪಿಸಿಕೊಳ್ಳಲು ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಅಪರಾಧಿಗಳಿಗೆ ದಂಡನೆಯಾಗದ್ದರಿಂದ ಹಿಂದಿನ ಪತ್ರಿಬಾಲ್ ಮತ್ತು ಮಚಿಲ್ ಎನ್‌ಕೌಂಟರ್‌ಗಳ ಕುರಿತ ವಿಚಾರಣೆಗಳು ವಿಫಲಗೊಂಡಿದ್ದವು ’ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಟ್ವೀಟಿಸಿದ್ದಾರೆ.

 ಸೇನೆಯು ನಕಲಿ ಎನ್‌ಕೌಂಟರ್‌ಗೆ ತನ್ನ ಯೋಧರನ್ನು ಹೊಣೆಯಾಗಿಸಿದೆ ಎಂದು ಹೇಳುವ ಮೂಲಕ ಕೆಲವರು ಸೇನೆಯ ಹೇಳಿಕೆಯನ್ನು ತಿರುಚಲು ಉದ್ದೇಶಪೂರ್ವಕ ಪ್ರಯತ್ನಿಸುತ್ತಿದ್ದಾರೆ. ವಾಸ್ತವದಲ್ಲಿ ಸೇನೆಯು ಹಾಗೆ ಹೇಳಿಲ್ಲ. ಎನ್‌ಕೌಂಟರ್‌ನಲ್ಲಿ ಮೃತ ಮೂವರು ಉಗ್ರಗಾಮಿಗಳಾಗಿದ್ದರೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸೇನೆಯು ಹೇಳಿರುವುದು ಎನ್‌ಕೌಂಟರ್ ನಕಲಿಯಾಗಿತ್ತು ಮತ್ತು ಮೃತರು ಉಗ್ರಗಾಮಿಗಳಾಗಿರಲಿಲ್ಲ ಎನ್ನುವುದನ್ನು ಅದು ನಂಬುವುದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಬೆಟ್ಟುಮಾಡುತ್ತಿದೆ. ಸೇನೆಯ ಹಿಂದಿನ ದಾಖಲೆಗಳನ್ನು ಪರಿಗಣಿಸಿದರೆ ಈಗಲೂ ಅದು ಪ್ರಕರಣವನ್ನು ಮುಚ್ಚಿಹಾಕಲು ಬಯಸಿದೆ ಮತ್ತು ಪಾರದರ್ಶಕ ಹಾಗೂ ವಿಶ್ವಾಸಾರ್ಹ ತನಿಖೆಗೆ ಅವಕಾಶ ನೀಡುವುದಿಲ್ಲ ಎಂಬಂತೆ ಕಂಡುಬರುತ್ತಿದೆ ಎಂದು ಮಾನವ ಹಕ್ಕು ಕಾರ್ಯಕರ್ತ ಖುರಂ ಪರ್ವೇಝ್ ಹೇಳಿದ್ದಾರೆ.

‘ಆಪರೇಷನ್ ಅಂಶಿಪೋರಾ’ದಲ್ಲಿ ಅಫ್ ಸ್ಪಾ ಕಾನೂನಿನ ಮಿತಿಯನ್ನು ಮೀರಿದ್ದು ವಿಚಾರಣೆಯಿಂದ ಗೊತ್ತಾಗಿದೆ. ಇದಕ್ಕೆ ಹೊಣೆಯಾದವರ ವಿರುದ್ಧ ಶಿಸ್ತುಕ್ರಮಕ್ಕೆ ಆದೇಶಿಸಲಾಗಿದೆ ಎಂದು ಶುಕ್ರವಾರ ಶ್ರೀನಗರದಲ್ಲಿ ಸೇನೆಯ ವಕ್ತಾರರು ತಿಳಿಸಿದ್ದರು.

ರಾಜೌರಿಯ ನಿವಾಸಿಗಳಾಗಿದ್ದು, ಉದ್ಯೋಗ ಹುಡುಕಿಕೊಂಡು ಶೋಪಿಯಾನ್ ಜಿಲ್ಲೆಗೆ ತೆರಳಿದ್ದ ಇಮ್ತಿಯಾಝ್ ಅಹ್ಮದ್, ಅಬ್ರಾರ್ ಅಹ್ಮದ್ ಮತ್ತು ಮುಹಮ್ಮದ್ ಇಬ್ರಾರ್ ಅವರು ಜು.18ರಂದು ಅಂಶಿಪೋರಾ ಗ್ರಾಮದಲ್ಲಿ ಎನ್‌ಕೌಂಟರ್ ಹೆಸರಿನಲ್ಲಿ ಸೇನೆಯಿಂದ ಕೊಲ್ಲಲ್ಪಟ್ಟಿದ್ದರು. ಶೋಧ ಕಾರ್ಯಾಚರಣೆ ವೇಳೆ ಅಲ್ ಬದ್ರ್ ಸಂಘಟನೆಗೆ ಸೇರಿದ ಉಗ್ರರು ಸೇನಾ ಸಿಬ್ಬಂದಿಗಳ ಮೇಲೆ ಗುಂಡು ಹಾರಿಸಿದ್ದರು ಮತ್ತು ಇದು ಎನ್‌ಕೌಂಟರ್‌ಗೆ ಕಾರಣವಾಗಿತ್ತು ಎಂದು ಆಗ ಪೊಲೀಸ್ ಹೇಳಿಕೆಯು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News