ಆರೋಗ್ಯ ಕಾರ್ಯಕರ್ತರ ಮೇಲೆ ದಾಳಿ ನಡೆಸುವವರಿಗೆ ಶಿಕ್ಷೆ ವಿಧಿಸುವ ವಿಧೇಯಕ ಅಂಗೀಕರಿಸಿದ ರಾಜ್ಯಸಭೆ

Update: 2020-09-19 16:12 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಸೆ, 19: ಕೊರೋನ ಸೋಂಕು ಅಥವಾ ಸಾಂಕ್ರಾಮಿಕ ರೋಗದಂತಹ ಯಾವುದೇ ಪರಿಸ್ಥಿತಿ ಸಂದರ್ಭ ಅದರ ವಿರುದ್ಧ ಹೋರಾಟ ನಡೆಸುವ ವೈದ್ಯರು ಹಾಗೂ ಆರೋಗ್ಯ ಸೇವಾ ಕಾರ್ಯಕರ್ತರ ಮೇಲೆ ದಾಳಿ ನಡೆಸುವವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸುವ ವಿಧೇಯಕವನ್ನು ರಾಜ್ಯಸಭೆ ಶನಿವಾರ ಅಂಗೀಕರಿಸಿತು.

ಕೇಂದ್ರ ಸರಕಾರ ಎಪ್ರಿಲ್‌ ನಲ್ಲಿ ಜಾರಿಗೊಳಿಸಿದ ಆಧ್ಯಾದೇಶಕ್ಕೆ ಬದಲಾಗಿ ಶನಿವಾರ ಮೇಲ್ಮನೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ವಿಧೇಯಕ-2020ನ್ನು ಮಂಡಿಸಿದರು. ಸಾಂಕ್ರಾಮಿಕ ರೋಗದ ಸಂದರ್ಭ ಹಿಂಸಾಚಾರದಿಂದ ಆರೋಗ್ಯ ಸೇವಾ ಸಿಬ್ಬಂದಿಯ ಜೀವ ಹಾಗೂ ಕಾರ್ಯನಿರ್ವಹಣೆ ಆವರಣ ಸೇರಿದಂತೆ ಆರೋಗ್ಯ ಸೇವಾ ಸಿಬ್ಬಂದಿಗೆ ಹಾಗೂ ಸೊತ್ತುಗಳಿಗೆ ರಕ್ಷಣೆ ನೀಡುವ 1897ರ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ತಿದ್ದುಪಡಿ ತಂದು ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ವಿಧೇಯಕ-2020 ಅನ್ನು ಕೇಂದ್ರ ಸರಕಾರ ಅಸ್ತಿತ್ವಕ್ಕೆ ತಂದಿದೆ. ಪ್ರಸಕ್ತ ಸಾಂಕ್ರಾಮಿಕ ರೋಗವನ್ನು ಹೋಲುವ ಯಾವುದೇ ಪರಿಸ್ಥಿತಿಯಲ್ಲಿ ಆರೋಗ್ಯ ಸೇವಾ ಸಿಬ್ಬಂದಿಯ ವಿರುದ್ಧ ಯಾವುದೇ ರೀತಿಯ ಹಿಂಸಾಚಾರ ಹಾಗೂ ಸೊತ್ತು ನಾಶದ ಬಗ್ಗೆ ‘ಶೂನ್ಯ ಸಹನೆ’ ಭರವಸೆ ನೀಡುವ ಉದ್ದೇಶವನ್ನು ಈ ವಿಧೇಯಕ ಹೊಂದಿದೆ.

ಸಾಂಕ್ರಾಮಿಕ ರೋಗ ಸ್ಫೋಟ ಅಥವಾ ಅದರ ಹರಡುವಿಕೆಯನ್ನು ತಡೆಯಲು ಕ್ರಮ ಕೈಗೊಳ್ಳಲು ಅಧಿಕಾರ ಹೊಂದಿದ ಯಾವುದೇ ವ್ಯಕ್ತಿಗಳು, ವೈದ್ಯರು, ದಾದಿಯರು, ಅರೆವೈದ್ಯಕೀಯ ಕಾರ್ಯಕರ್ತರು, ಸಮುದಾಯ ಆರೋಗ್ಯ ಕಾರ್ಯಕರ್ತರಂತಹ ಸಾರ್ವಜನಿಕ ಹಾಗೂ ಆರೋಗ್ಯ ಸೇವೆ ಒದಗಿಸುವವರು ಮತ್ತು ರಾಜ್ಯ ಸರಕಾರ ಅಧಿಕೃತ ಗಝೆಟ್‌ನಲ್ಲಿ ಅಧಿಸೂಚನೆ ಹೊರಡಿಸಿ ಘೋಷಿಸಿದಂತಹ ಇಂತಹ ಯಾವುದೇ ವ್ಯಕ್ತಿಗಳು ಈ ‘ಆರೋಗ್ಯ ಸೇವಾ ಸಿಬ್ಬಂದಿ’ಯಲ್ಲಿ ಒಳಗೊಳ್ಳಲಿದ್ದಾರೆ.

ಕ್ಲಿನಿಕಲ್ ಕಟ್ಟಡ, ಕ್ವಾರಂಟೈನ್‌ಗಾಗಿ ಗುರುತಿಸಲಾದ ಯಾವುದೇ ಸೌಲಭ್ಯ, ರೋಗಿಗಳ ಐಸೋಲೇಷನ್, ಮೊಬೈಲ್ ವೈದ್ಯಕೀಯ ಘಟಕ ಹಾಗೂ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿ ಆರೋಗ್ಯ ಸೇವೆ ಸಿಬ್ಬಂದಿಯ ನೇರೆ ಸೊತ್ತುಗಳಿಗೆ ಹಾನಿ ಎಸಗುವವರ ವಿರುದ್ಧ ಈ ವಿಧೇಯಕದ ದಂಡನಾ ನಿಯಮಗಳನ್ನು ಅನ್ವಯಿಸಲು ಸಾಧ್ಯ. ಈ ಅಪರಾಧವನ್ನು ಇನ್ಸ್‌ಪೆಕ್ಟರ್ ಶ್ರೇಣಿಯ ಒಳಗಿರುವ ಅಧಿಕಾರಿ 30 ದಿನಗಳ ಒಳಗೆ ತನಿಖೆ ನಡೆಸಲಿದ್ದಾರೆ. ಅಲ್ಲದೆ, ಕಾರಣವನ್ನು ಲಿಖಿತವಾಗಿ ದಾಖಲಿಸಬೇಕಾದ ಹೊರತಾಗಿ ನ್ಯಾಯಾಲಯ ವಿಚಾರಣೆಯನ್ನು ವಿಸ್ತರಿಸದೇ ಇದ್ದರೆ, ಈ ವಿಧೇಯಕದಂತೆ 1 ವರ್ಷಗಳಲ್ಲಿ ವಿಚಾರಣೆ ಪೂರ್ಣಗೊಳ್ಳಲಿದೆ.

ಹಿಂಸಾಚಾರದಂತಹ ಕೃತ್ಯ ನಡೆಸಿದರೆ ಅಥವಾ ಉತ್ತೇಜಿಸಿದರೆ ಮೂರು ತಿಂಗಳಿಂದ ಐದು ತಿಂಗಳು ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರದಿಂದ 2 ಲಕ್ಷದ ವರೆಗೆ ದಂಡ ವಿಧಿಸುವ ಅವಕಾಶವನ್ನು ಈ ವಿಧೇಯಕ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News