ದೇಶದಲ್ಲಿ ಶನಿವಾರ 94 ಸಾವಿರಕ್ಕೂ ಅಧಿಕ ಕೊರೋನ ಸೋಂಕು ಪತ್ತೆ, 1145 ಮಂದಿ ಬಲಿ

Update: 2020-09-20 03:55 GMT

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ತಪಾಸಣೆಯನ್ನು ಗಣನೀಯವಾಗಿ ಕಡಿಮೆ ಮಾಡಿದ್ದರೂ, ಹೊಸ ಪ್ರಕರಣಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ದೇಶದಲ್ಲಿ ಶನಿವಾರ 94 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗಿವೆ. ಶನಿವಾರ ದೇಶಾದ್ಯಂತ 1145 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಶುಕ್ರವಾರ ದೇಶದಲ್ಲಿ ಕೇವಲ 8.8 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಎರಡು ದಿನಗಳ ಹಿಂದಿನ ತಪಾಸಣೆಗೆ ಹೋಲಿಸಿದರೆ ಇದು 2.5 ಲಕ್ಷದಷ್ಟು ಕಡಿಮೆ. ಬುಧವಾರ 11.4 ಲಕ್ಷ ಹಾಗೂ ಗುರುವಾರ 10.1 ಲಕ್ಷ ಮಾದರಿಗಳ ಪರೀಕ್ಷೆ ನಡೆದಿತ್ತು. ಶುಕ್ರವಾರ ಪರೀಕ್ಷೆ ನಡೆಸಿದ ಮಾದರಿಗಳ ಸಂಖ್ಯೆ ಆ. 25ರ ಬಳಿಕ ಕನಿಷ್ಠ ಎಂದು covid19india.org ವೆಬ್‌ಸೈಟ್‌ನಿಂದ ತಿಳಿದುಬರುತ್ತದೆ.

ದೇಶದಲ್ಲಿ ಪ್ರಕರಣಗಳ ಹೆಚ್ಚಳ ದರ ಶೇಕಡ 8.6-8.7ರ ಆಸುಪಾಸಿನಲ್ಲಿದ್ದು, ಇಷ್ಟೊಂದು ಪ್ರಮಾಣದಲ್ಲಿ ಪ್ರಕರಣಗಳು ಹೆಚ್ಚುತ್ತಿರುವಾಗ ಪ್ರಕರಣಗಳ ತಪಾಸಣೆಯೂ ಹೆಚ್ಚಬೇಕು ಎಂದು ತಜ್ಞರು ಹೇಳುತ್ತಾರೆ. ಧನಾತ್ಮಕತೆ ದರ ಶೇಕಡ 5ಕ್ಕಿಂತ ಕಡಿಮೆ ಆದಾಗ ಮಾತ್ರ ತಪಾಸಣೆ ಕಡಿಮೆಗೊಳಿಸಬಹುದು ಎನ್ನುವುದು ಅವರ ಅಭಿಮತ.

ದೇಶದಲ್ಲಿ ಶನಿವಾರ 94,145 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 53,94,625ಕ್ಕೇರಿದೆ. ದೇಶದಲ್ಲಿ ಸತತ ಆರನೇ ದಿನ 90 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಈ ಮಧ್ಯೆ ಗುಣಮುಖರಾದವರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇದುವರೆಗೆ ಗರಿಷ್ಠ ಸಂಖ್ಯೆಯ (42,01,211) ಸೋಂಕಿತರು ಗುಣಮುಖರಾದ ದಾಖಲೆ ಅಮೆರಿಕದ ಹೆಸರಿನಲ್ಲಿತ್ತು. ಇದೀಗ ಭಾರತದಲ್ಲಿ ಗುಣಮುಖರಾದವರ ಸಂಖ್ಯೆ 42,92,112ಕ್ಕೇರಿದೆ.

ದೇಶಾದ್ಯಂತ 1145 ಸೋಂಕಿತರು ಮೃತಪಟ್ಟಿದ್ದು, ಸತತ ಐದನೇ ದಿನ 1100ಕ್ಕೂ ಅಧಿಕ ಸಾವು ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News