ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣ: ಮತ್ತೊಬ್ಬ ಆರೋಪಿಯ ಬಂಧನ

Update: 2020-09-20 12:33 GMT

ಬೆಂಗಳೂರು, ಸೆ.20: ಸ್ಯಾಂಡಲ್‍ವುಡ್‍ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ತನಿಖೆ ಮುಂದುವರೆಸಿರುವ ಸಿಸಿಬಿ ಪೊಲೀಸರು, ಬಂಧಿತ ನಟಿಯೊಬ್ಬಾಕೆಯ ಸಂಪರ್ಕದಲ್ಲಿದ್ದ ಶ್ರೀ ಆಂಕಲ್ ಯಾನೆ ಶ್ರೀನಿವಾಸ ಸುಬ್ರಹ್ಮಣ್ಯನ್ ಅನ್ನು ಬಂಧಿಸಿದ್ದಾರೆ.

ಶ್ರೀ ಆಂಕಲ್, ಪ್ರಕರಣದಲ್ಲಿ 17ನೆ ಆರೋಪಿಯಾಗಿದ್ದಾನೆ. ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ರವಿಶಂಕರ್ ಸಿಸಿಬಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಶ್ರೀ ಹೆಸರು ಉಲ್ಲೇಖಿತವಾಗಿತ್ತು. ಪ್ರಕರಣದ 5ನೆ ಆರೋಪಿಯೂ ಆದ ವೈಭವ್ ಜೈನ್ ಮತ್ತು ಶ್ರೀ ಆಂಕಲ್ ಪರಿಚಿತರಾಗಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಈತ ಡ್ರಗ್ಸ್ ಪೆಡ್ಲರ್ ಆಗಿದ್ದು, ಶ್ರೀನಿವಾಸ ಸುಬ್ರಹ್ಮಣ್ಯನ್ ನಗರದ ಹೊರ ವಲಯದಲ್ಲಿ ವೀಕೆಂಡ್ ಹೋಮ್ ಹೆಸರಿನಲ್ಲಿ ಕೆಲ ಮನೆ ಮತ್ತು ಫ್ಲಾಟ್‍ಗಳನ್ನು ಹೊಂದಿದ್ದಾನೆ. ಈತ ಬಹುತೇಕ ಫ್ಲಾಟ್‍ಗಳನ್ನು ಲೀಸ್ ಅಥವಾ ಬಾಡಿಗೆಗೆ ಪಡೆದಿದ್ದಾನೆ ಎನ್ನಲಾಗಿದೆ.

ನಗರದ ಐಷರಾಮಿ ಹೋಟೆಲ್‍ನಲ್ಲಿ ಪಾರ್ಟಿ ಮಾಡಿದ ಬಳಿಕ ಬಂಧಿತ ಆರೋಪಿಗಳ ಪೈಕಿ ಕೆಲವರು ಜೊತೆಗೂಡಿ ವೀಕೆಂಡ್ ಹೋಮ್‍ನಲ್ಲಿ ತೆರಳಿ ಎಂಡಿಎಂಎ ಸೇವನೆ ಮಾಡಿದ್ದಾರೆಂಬ ಮಾಹಿತಿಯಿದೆ. ಸದ್ಯ ಬಂಧಿತನೊಂದಿಗೆ ಮಾದಕ ವಸ್ತುವಿನ 13 ಮಾತ್ರೆಗಳು, 100 ಗ್ರಾಂ ಗಾಂಜಾ 1.1 ಗ್ರಾಂ ಎಂಡಿಎ ಹಾಗೂ 0.5 ಗ್ರಾಂ ಹ್ಯಾಷ್ ಆಯಿಲ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News