17 ಜಿಲ್ಲೆಗಳಲ್ಲಿ ಲಿಡ್ಕರ್ ಲೆದರ್ ಎಂಫೋರಿಯಂ ಪ್ರಾರಂಭ: ಡಿಸಿಎಂ ಗೋವಿಂದ ಕಾರಜೋಳ

Update: 2020-09-20 14:58 GMT

ಬೆಂಗಳೂರು, ಸೆ. 20: `ಲಿಡ್ಕರ್' ಬ್ರಾಂಡ್ ಜನಪ್ರಿಯಗೊಳಿಸುವ ಜೊತೆಗೆ ಮಾರುಕಟ್ಟೆ ವಿಸ್ತರಿಸುವ ಉದ್ದೇಶದಿಂದ ಲಿಡ್ಕರ್ ಲೆದರ್ ಎಂಫೋರಿಯಂ ಇಲ್ಲದ 17 ಜಿಲ್ಲೆಗಳಲ್ಲಿ ಮಳಿಗೆಗಳನ್ನು ಆರಂಭಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ
ಎಂ.ಕಾರಜೋಳ ಪ್ರಕಟಿಸಿದ್ದಾರೆ.

ರವಿವಾರ ಇಲ್ಲಿನ ಜಯನಗರದ ನಾಲ್ಕನೇ ಹಂತದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ನೂತನವಾಗಿ ಆರಂಭಿಸಿರುವ ಡಾ. ಬಾಬು
ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಲಿಡ್ಕರ್ ಮಾರಾಟ ಮಳಿಗೆ ಹಾಗೂ ವೆಬ್‍ಸೈಟ್‍ಗೆ ಚಾಲನೆ ನೀಡಿ ಅವರು ಮಾತನಾಡಿದರು. ಬೆಳಗಾವಿ, ಬಾಗಲಕೋಟೆ, ಧಾರವಾಡ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಯಾರಿಸುತ್ತಿರುವ ಕೊಲ್ಹಾಪುರಿ ಚಪ್ಪಲಿಗಳನ್ನು ಭೌಗೋಳಿಕವಾಗಿ ವಿಶೇಷ ಉತ್ಪನ್ನ ಎಂದು ಗುರುತಿಸಿ ಜಿಐ ಟ್ಯಾಗ್ ನೀಡಲಾಗಿದೆ. ಇದು ಕೊಲ್ಹಾಪುರಿ ಚಪ್ಪಲಿ ತಯಾರಿಸುವ ಕುಶಲಕರ್ಮಿಗಳಿಗೆ ಕಾನೂನು ರಕ್ಷಣೆ ಸಿಕ್ಕಂತಾಗಿದೆ. ರಾಜ್ಯಕ್ಕೂ ಹೆಮ್ಮೆಯ ವಿಷಯವಾಗಿರುವುದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್, ಎಂ.ಜಿ. ರಸ್ತೆಯಲ್ಲಿರುವ ಕಾವೇರಿ ಎಂಫೋರಿಯಂ ಹಾಗೂ ಲಿಡ್ಕರ್ ಎಂಫೋರಿಯಂಗಳಲ್ಲಿ ಕೊಲ್ಹಾಪುರಿ ಚಪ್ಪಲಿ ಮಾರಾಟ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಲಿಡ್ಕರ್ ಉತ್ಪನ್ನಗಳಿಗೆ ಮತ್ತಷ್ಟು ಮಾರುಕಟ್ಟೆ ಮೌಲ್ಯ ತಂದು ಕೊಡುವ ನಿಟ್ಟಿನಲ್ಲಿ ಇ-ಕಾಮರ್ಸ್ ವ್ಯವಸ್ಥೆಯುಳ್ಳ ವೆಬ್‍ಸೈಟ್ ರೂಪಿಸಲಾಗಿದೆ. ಮಾರುಕಟ್ಟೆಯಲ್ಲಿ ಇತರ ಸಂಸ್ಥೆಗಳೊಂದಿಗೆ ಪೈಪೋಟಿ ನೀಡಬೇಕಿರುವ ಹಿನ್ನೆಲೆಯಲ್ಲಿ ಲಿಡ್ಕರ್ ಬ್ರಾಂಡ್‍ಗೆ ಹೊಸ ಸ್ಪರ್ಶ ನೀಡಲಾಗಿದೆ. ಹೊಸ ಲೋಗೋ ಹಾಗೂ ಟ್ಯಾಗ್‍ಲೈನ್ ನೀಡಲಾಗಿದೆ. ಅತ್ಯುತ್ತಮ ಗುಣಮಟ್ಟದ ಚರ್ಮವನ್ನು ಬಳಸಿ ಉತ್ಪನ್ನಗಳ ಗುಣಮಟ್ಟ ಉನ್ನತೀಕರಿಸಲಾಗಿದೆ. ಲಿಡ್ಕರ್ ನಿಗಮದ ವಾಣಿಜ್ಯ ಚಟುವಟಿಕೆಗಳ ಪುನಶ್ಚೇತನಕ್ಕಾಗಿ 8.5 ಕೋಟಿ ರು. ಅನುದಾನ ಒದಗಿಸಲಾಗುತ್ತಿದೆ ಎಂದರು.

ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ನಟರಾಜ್ ಮಾತನಾಡಿ, ಮಳಿಗೆಯಲ್ಲಿ ಶೂ ಮತ್ತು ಪಾದರಕ್ಷೆಗಳು, ಕೊಲ್ಹಾಪುರಿ ಚಪ್ಪಲಿಗಳು, ಮೆಡಿಕೇರ್ ಚಪ್ಪಲಿಗಳು, ಮಹಿಳೆಯರ ಹ್ಯಾಂಡ್ ಬ್ಯಾಗ್, ಪರ್ಸ್‍ಗಳು, ಲ್ಯಾಪ್‍ಟಾಪ್ ಬ್ಯಾಗ್, ಬೆಲ್ಟ್, ಜಾಕೆಟ್ ಮತ್ತಿತರರ ಉತ್ಪನ್ನಗಳು ಗ್ರಾಹಕರಿಗೆ ದೊರೆಯಲಿವೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕಿ ಸೌಮ್ಯಾರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್, ಇಲಾಖೆ ಆಯುಕ್ತ ಡಾ. ರವಿಕುಮಾರ್ ಸುರಪುರ ಉಪಸ್ಥಿತರಿದ್ದರು.

ನಾನು ವೈಯಕ್ತಿಕವಾಗಿ ಯಾವುದೇ ಪ್ರಾಣಿಯ ಉತ್ಪನ್ನಗಳನ್ನು ಬಳಕೆ ಮಾಡುವುದಿಲ್ಲ. ಜೊತೆಗೆ ಪ್ರಾಣಿವಧೆ ಮಾಡುವ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಸರಕಾರ ಇನ್ನು ಹೆಚ್ಚಿನ ಮಟ್ಟದ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು.
-ಸೌಮ್ಯಾ ರೆಡ್ಡಿ, ಕಾಂಗ್ರೆಸ್ ಶಾಸಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News