'ವಿದ್ಯಾಗಮ'ಕ್ಕೆ ಅನುಮತಿ ನೀಡಿರುವುದು ತಾರತಮ್ಯ ಧೋರಣೆ: ಶಶಿಕುಮಾರ್

Update: 2020-09-20 15:55 GMT

ಬೆಂಗಳೂರು, ಸೆ. 20: ಸರಕಾರಿ ಶಾಲೆಗಳಿಗೆ ವಿದ್ಯಾಗಮ ಕಾರ್ಯಕ್ರಮದ ಮೂಲಕ ತರಗತಿ ನಡೆಸಲು ಅನುಮತಿ ನೀಡಿ, ಅನುದಾನ ರಹಿತ ಖಾಸಗಿ ಶಾಲೆಗಳನ್ನು ತೆರೆಯದಂತೆ ಆದೇಶಿಸಿರುವುದು ತಾರತಮ್ಯ ನೀತಿಯಾಗಿದೆ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಕಾರ್ಯದರ್ಶಿ ಶಶಿಕುಮಾರ್ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಖಾಸಗಿ ಶಾಲೆಗಳನ್ನು ಪ್ರಾರಂಭಕ್ಕೆ ಕೊರೋನ ಅಡ್ಡಿಯಾಗುತ್ತದೆ. ಆದರೆ, ವಿದ್ಯಾಗಮದ ಮೂಲಕ ಸರಕಾರಿ ಶಾಲೆಗಳನ್ನು ನಡೆಸಲು ಕೊರೋನ ಅಡ್ಡಿ ಮಾಡುವುದಿಲ್ಲವೇ. ಕೂಡಲೇ ವಿದ್ಯಾಗಮ ಕಾರ್ಯಕ್ರಮವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

ಶಿಕ್ಷಣ ಇಲಾಖೆ ವಿದ್ಯಾಗಮ ಕಾರ್ಯಕ್ರಮ ಮಾಡುವ ಮೂಲಕ ಖಾಸಗಿ ಶಾಲೆಗಳ ಮಕ್ಕಳನ್ನು ಸೆಳೆಯುವಂತಹ ಹುನ್ನಾರ ಮಾಡುತ್ತಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ಸರಕಾರಿ ಹಾಗೂ ಖಾಸಗಿ ಶಾಲೆಗಳ ನಡುವೆ ಈ ರೀತಿ ಭೇದಭಾವ ಮಾಡುವುದನ್ನು ನಿಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

ಸೆ.21ರಿಂದ 9ರಿಂದ 12ನೇ ತರಗತಿಗಳನ್ನು ಪ್ರಾರಂಭಿಸಬಹುದೆಂದು ಶಿಕ್ಷಣ ಇಲಾಖೆ ಆದೇಶಿಸಿ, ಕೊನೆಯ ಹಂತದಲ್ಲಿ ವಾಪಸ್ ಪಡೆದಿದೆ. ಇದರಿಂದಾಗಿ ಖಾಸಗಿ ಶಾಲೆಗಳು ಸ್ಯಾನಿಟೈಸರ್ ಸೇರಿದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮಾಡಿದ್ದ ಹಣ ವ್ಯರ್ಥವಾದಂತಾಗಿದೆ. ಕೋವಿಡ್ ಸಂದರ್ಭದಲ್ಲಿ ಇಂತಹ ಗೊಂದಲಕಾರಿ ಆದೇಶ ಮಾಡುವುದನ್ನು ಇನ್ನು ಮುಂದಾದರು ನಿಲ್ಲಿಸಲಿ ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News