ಪಿಯು ಅತಿಥಿ ಉಪನ್ಯಾಸಕರ ಸಮಸ್ಯೆ ಕೇಳಲು ಸರಕಾರಕ್ಕೆ ಕಿವಿ ಇಲ್ಲ: ಪ್ರೊ.ಜಿ.ಕೆ.ಗೋವಿಂದರಾವ್

Update: 2020-09-20 16:03 GMT

ಬೆಂಗಳೂರು, ಸೆ.20: ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಕೇಳಲು ಸರಕಾರಕ್ಕೆ ಕಿವಿ ಇಲ್ಲವಾಗಿದೆ. ಶಿಕ್ಷಣ ಸಚಿವರಿಗೆ ಪ್ರಜ್ಞೆಯೇ ಇಲ್ಲವೆಂದು ಹಿರಿಯ ಸಾಹಿತಿ ಪ್ರೊ.ಜಿ.ಕೆ.ಗೋವಿಂದರಾವ್ ಕಿಡಿಕಾರಿದ್ದಾರೆ.

ರವಿವಾರ ಅತಿಥಿ ಉಪನ್ಯಾಸಕರ ಕೂಗು ವಿಧಾನಸೌಧ ಮುಟ್ಟಲಿ ಎಂಬ ಘೋಷವಾಕ್ಯದೊಂದಿಗೆ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಮತ್ತು ಸರಕಾರಿ ಪಿಯು ಅತಿಥಿ ಉಪನ್ಯಾಸಕರ ರಾಜ್ಯಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಇವತ್ತಿನ ರಾಜಕಾರಣಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಿದ್ದಾರೆ ಎಂಬುದೇ ಗೊತ್ತಿಲ್ಲ. ರಾಜ್ಯದ ಶಿಕ್ಷಣ ಸಚಿವರಿಗೆ ಎಸೆಸೆಲ್ಸಿ, ಪಿಯುಸಿ ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟಿಸಿದ್ದೇ ದೊಡ್ಡ ಸಾಧನೆಯೆಂಬ ಗುಂಗಿನಲ್ಲೇ ಇದ್ದಾರೆಂದು ತಿಳಿಸಿದರು.

ಅತಿಥಿ ಉಪನ್ಯಾಸಕರು ಕಳೆದ 6-7 ತಿಂಗಳಿನಿಂದ ಸಂಬಳವಿಲ್ಲದೆ ಪರದಾಡುತ್ತಿದ್ದು, ಈ ಸಮಸ್ಯೆ ಶಿಕ್ಷಣ ಸಚಿವರ ಕಣ್ಣಿಗೆ ಕಾಣುತ್ತಿಲ್ಲವೇ. ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸದೆ ಸಚಿವರು ಮಾಡುವ ಯಾವುದೇ ಕೆಲಸಕ್ಕೂ ಮೂರುಕಾಸಿನ ಬೆಲೆ ಇಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಲಿ. ದೇಶದ ರಕ್ಷಣೆಯ ಹೆಸರಿನಲ್ಲಿ ಸಾವಿರಾರು ಕೋಟಿ ರೂ.ಖರ್ಚು ಮಾಡುವ ಸರಕಾರಗಳಿಗೆ, ದೇಶದ ಭವಿಷ್ಯವನ್ನು ನಿರ್ಮಾಣ ಮಾಡುವ ಶಿಕ್ಷಕರಿಗೆ ಸಂಬಳವನ್ನು ನೀಡದಿರುವುದು ನಾಚಿಕೆಗೇಡೆಂದು ಅವರು ದೂರಿದ್ದಾರೆ.

ಶಿಕ್ಷಣ ಉಳಿಸಿ ಸಮಿತಿಯ ರಾಜ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ನಮ್ಮ ಸರಕಾರಗಳಿಗೆ ಶಿಕ್ಷಣ ಕ್ಷೇತ್ರ ಅನುತ್ಪಾದಕ ಕ್ಷೇತ್ರ ಎಂಬ ತಪ್ಪು ಕಲ್ಪನೆಯಿದೆ. ಆದರೆ, ಶಾಲಾ-ಕಾಲೇಜುಗಳಲ್ಲಿಯೇ ದೇಶದ ಭವಿಷ್ಯ ನಿರ್ಮಾಣವಾಗುತ್ತದೆ ಎಂಬುದನ್ನು ರಾಜಕಾರಣಿಗಳಿಗೆ ತಿಳಿಸಬೇಕಿದೆ. ಶಿಕ್ಷಣ ಇಲಾಖೆ ಸಂಬಳಕೊಡದ ಕಾರಣ ಅತಿಥಿ ಉಪನ್ಯಾಸಕರು ನರೇಗಾದಡಿ ಕೆಲಸಕ್ಕೆ ಹೋಗುವಂತಹ ಸಂದರ್ಭ ಸೃಷ್ಟಿಯಾಗಿದೆ. ಸರಕಾರಕ್ಕೆ ಕಿಂಚಿತ್ತಾದರು ಸಂವೇದನೆಯಿದ್ದರೆ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಕೂಡಲೇ ಬಗೆ ಹರಿಸಲಿ ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News