ರಾಜ್ಯಸಭೆ: ಚೊಚ್ಚಲ ಭಾಷಣ ಪೂರ್ಣಗೊಳಿಸಲು ದೇವೇಗೌಡರಿಗೆ ಅವಕಾಶ ನಿರಾಕರಣೆ

Update: 2020-09-20 17:01 GMT

ಹೊಸದಿಲ್ಲಿ,ಸೆ.20: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರವಿವಾರ ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರಾದರೂ ಸದನದಲ್ಲಿ ಅವರ ಚೊಚ್ಚಲ ಭಾಷಣಕ್ಕೆ ಬಿಜೆಪಿ ಸದಸ್ಯರು ನಿರಂತರ ವ್ಯತ್ಯಯವನ್ನುಂಟು ಮಾಡಿದರು. ಇದು ಸಾಲದೆಂಬಂತೆ 10 ನಿಮಿಷಗಳಲ್ಲಿ ಭಾಷಣವನ್ನು ಪೂರ್ಣಗೊಳಿಸುವಂತೆ ಅವರನ್ನು ಆಗ್ರಹಿಸಿದ ಪೀಠದಲ್ಲಿದ್ದ ಉಪ ಸಭಾಪತಿ ಹರಿವಂಶ ಅವರು ದೇವೇಗೌಡರು ಇನ್ನೂ ಮಾತನಾಡುತ್ತಿದ್ದಾಗಲೇ ಮುಂದಿನ ಭಾಷಣಕಾರರಿಗೆ ಭಾಷಣವನ್ನು ಆರಂಭಿಸುವಂತೆ ಸೂಚಿಸಿದರು.

 ಈ ಘಟನೆಯ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿರುವ ಜೆಡಿಎಸ್,ಇದು ಕರ್ನಾಟಕಕ್ಕೆ ಮಾಡಿರುವ ಅವಮಾನ ಎಂದು ಬಣ್ಣಿಸಿದೆ.

 ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಜೆಡಿಎಸ್ ವಕ್ತಾರ ಟಿ.ಎ.ಶರವಣ ಅವರು, ಮನಮೋಹನ ಸಿಂಗ್ ಮತ್ತು ದೇವೇಗೌಡ ಹೀಗೆ ಸದನದಲ್ಲಿ ಕೇವಲ ಇಬ್ಬರು ಮಾಜಿ ಪ್ರಧಾನಿಗಳಿದ್ದಾರೆ. ಕನ್ನಡಿಗರಿಗೆ ಸದನದಲ್ಲಿ ಗೌರವ ದೊರೆಯುತ್ತಿಲ್ಲ. ಸಂಸ್ಕೃತಿ ಕುರಿತು ಸಮಿತಿಯನ್ನು ರಚಿಸಲಾಗಿದ್ದರೂ ಅದರಲ್ಲಿ ದಕ್ಷಿಣ ಭಾರತೀಯರಿಗೆ ಸ್ಥಾನವಿಲ್ಲ. ಕೇಂದ್ರ ಸರಕಾರವು ಕರ್ನಾಟಕವನ್ನು ಲಘುವಾಗಿ ಪರಿಗಣಿಸುತ್ತಿದೆ. ರಾಜ್ಯವು ಅವರಿಗೆ 25 ಸಂಸದರನ್ನು ನೀಡಿದ್ದರೂ ಅವರಿಗೆ ನಮ್ಮ ಬಗ್ಗೆ ಕಾಳಜಿಯೇ ಇಲ್ಲ ಎಂದು ಹೇಳಿದರು.

ಸಂಸತ್ತಿನಲ್ಲಿ ವಿವಾದಾಸ್ಪದ ಕೃಷಿ ಮಸೂದೆಗಳಿಗೆ ಸಂಬಂಧಿಸಿದಂತೆ ರೈತರ ಸಮಸ್ಯೆಗಳೊಂದಿಗೆ ದೇವೇಗೌಡ ತನ್ನ ಮಾತು ಆರಂಭಿಸಿದ್ದರು. ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜಕಾರಣಿಯಾಗಿ ತನ್ನ ಅನುಭವಗಳ ಬಗ್ಗೆ ಅವರು ಹೇಳುತ್ತಿದ್ದಂತೆ ನಾಲ್ಕನೇ ನಿಮಿಷದಲ್ಲಿಯೇ ಭಾಷಣವನ್ನು ಮುಗಿಸುವಂತೆ ಸ್ಪೀಕರ್ ಅವರಿಗೆ ಸೂಚಿಸಲು ಆರಂಭಿಸಿದ್ದರು. ಭಾಷಣವನ್ನು ಮುಗಿಸುವಂತೆ ಆಡಳಿತಾರೂಢ ಬಿಜೆಪಿಯ ಹಲವು ಸದಸ್ಯರೂ ಬೊಬ್ಬೆ ಹಾಕುತ್ತಿದ್ದರು.

ಈ ವಯಸ್ಸಿನಲ್ಲಿಯೂ ಅವರು ರಾಜ್ಯವನ್ನು ಪ್ರತಿನಿಧಿಸಲು ಸದನದಲ್ಲಿರುವುದು ಮುಖ್ಯವಾಗಿದೆ. ತನ್ನ ಭಾಷಣವನ್ನು ಮಾಡಲು ಮತ್ತು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲೂ ಕೇಂದ್ರ ಸರಕಾರ ಮತ್ತು ಬಿಜೆಪಿ ಸಂಸದರು ಅವರಿಗೆ ಅವಕಾಶ ನೀಡಲಿಲ್ಲ. ಇದು ಅವರಿಗೆ ಮಾತ್ರವಲ್ಲ,ಕನ್ನಡಿಗರಿಗೂ ಮಾಡಿರುವ ಅವಮಾನವಾಗಿದೆ ಎಂದು ಶರವಣ ಹೇಳಿದರು.

ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ 87ರ ಹರೆಯದ ದೇವೇಗೌಡ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸ್ಪೀಕರ್‌ಗೆ ಕೈಗಳನ್ನು ಜೋಡಿಸಿ ವಂದಿಸಿದರು. 1996ರಿಂದೀಚಿಗೆ ಅವರು ಇದೇ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News