ಒಮಾನ್ ‌ನಲ್ಲಿ ಶೀಘ್ರವೇ ವಸ್ತ್ರಸಂಹಿತೆ ಜಾರಿ ಸಾಧ್ಯತೆ

Update: 2020-09-21 17:45 GMT

ಮಸ್ಕತ್, ಸೆ.20: ಸಾರ್ವಜನಿಕ ಸ್ಥಳಗಳಲ್ಲಿ ವಸ್ತ್ರಧಾರಣೆಗೆ ಸಂಬಂಧಿಸಿ ಒಮಾನ್ ಪೌರಾಡಳಿತ ಸಮಿತಿಯು ನೂತನ ವಸ್ತ್ರಸಂಹಿತೆಯೊಂದನ್ನು ರೂಪಿಸಿದೆ. ಸ್ತ್ರೀ ಪುರುಷ ಭೇದವಿಲ್ಲದೆ ಎಲ್ಲರೂ ಸಭ್ಯವಾದ ರೀತಿಯಲ್ಲಿ ವಸ್ತ್ರ ಧರಿಸುವಂತೆ ಮಾಡುವ ನಿಟ್ಟಿನಲ್ಲಿ ಈ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಅವು ಶೀಘ್ರದಲ್ಲೇ ಜಾರಿಗೆ ಬರಲಿದೆ. ಮಾಲ್‌ಗಳು, ಶಾಪ್ಪಿಂಗ್ ಮಳಿಗೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೆಲವು ಜನರು ಅಸಭ್ಯ ರೀತಿಯಲ್ಲಿ ಉಡುಪುಗಳನ್ನು ಧರಿಸುತ್ತಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ನಿಯಮಾವಳಿಗಳನ್ನು ರೂಪಿಸಲಾಗಿದೆಯೆಂದು ಟೈಮ್ಸ್ ಆಫ್ ಒಮಾನ್ ಸುದ್ದಿಪತ್ರಿಕೆ ವರದಿ ಮಾಡಿದೆ.

 ನಿಬಂಧನೆಗಳನ್ನು ಉಲ್ಲಂಘಿಸುವವರಿಗೆ 300 ಒಮಾನಿ ರಿಯಾಲ್‌ವರೆಗೂ ದಂಡ ಹಾಗೂ ಮೂರು ತಿಂಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುವಂತೆಯೂ ನಿಯಮಾವಳಿಗಳಲ್ಲಿ ಸೂಚಿಸಲಾಗಿದೆ. ಇದಕ್ಕೆ ಸಂಬಂಧಿಸಿ ಪೌರಾಡಳಿತ ಸಮಿತಿಯು ರೂಪಿಸಿರುವ ನೂತನ ನಿಯಮಾವಳಿಗಳನ್ನು ಸಚಿವ ಸಂಪುಟ ಸಮಿತಿಯ ಒಪ್ಪಿಗೆಗೆ ಕಳುಹಿಸಲಾಗಿದೆ.

ವಸ್ತ್ರಧಾರಣೆ ಹೇಗಿರಬೇಕೆಂಬುದು ಈವರೆಗೆ ಬಹಿರಂಗಪಡಿಸಿಲ್ಲವಾದರೂ, ತೋಳಿನಿಂದ ಹಿಡಿದು, ಮೊಣಕಾಲವರೆಗೆ ದೇಹದ ಭಾಗಗಳನ್ನು ಸಂಪೂರ್ಣವಾಗಿ ಉಡುಪಿನಿಂದ ಮುಚ್ಚಿರಬೇಕೆಂದು ನಿಯಮಾವಳಿಗಳಲ್ಲಿ ತಿಳಿಸಲಾಗಿದೆಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News