ಗೆಲುವನ್ನು ಮುಂದುವರಿಸುವತ್ತ ಚೆನ್ನೈ ಚಿತ್ತ

Update: 2020-09-21 18:33 GMT

ಶಾರ್ಜಾ: ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಂಗಳವಾರ ಇಲ್ಲಿ ನಡೆಯಲಿರುವ ಐಪಿಎಲ್‌ನ 4ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.

 ಚೆನ್ನೈ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೇಡು ತೀರಿಸಿಕೊಂಡಿದೆ. ಅಬುಧಾಬಿಯಲ್ಲಿ ಶನಿವಾರ ನಡೆದ ಟೂರ್ನಮೆಂಟ್ ಉದ್ಘಾಟನಾ ಪಂದ್ಯದಲ್ಲಿ ಐದು ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿತ್ತು. ಚೆನ್ನೈ ಎರಡನೇ ಪಂದ್ಯದಲ್ಲೂ ಗೆಲುವಿನ ಅಭಿಯಾನ ಮುಂದುವರಿಸುವ ಯೋಜನೆಯಲ್ಲಿದೆ.

  ಬೆನ್ ಸ್ಟೋಕ್ಸ್ ಅನುಪಸ್ಥಿತಿಯು ರಾಯಲ್ಸ್‌ನ ಅಭಿಯಾನಕ್ಕೆ ಪ್ರಾರಂಭದಲ್ಲಿಯೇ ತೀವ್ರವಾಗಿ ಪರಿಣಾಮ ಬೀರುವ ಸಾಧ್ಯತೆ ಕಂಡು ಬಂದಿದೆ. ತಂದೆಯ ಅನಾರೋಗ್ಯದಿಂದಾಗಿ ಸ್ಟೋಕ್ಸ್ ತಂಡದಿಂದ ದೂರವಾಗಿದ್ದಾರೆ.

  ನಾಯಕ ಸ್ಟೀವ್ ಸ್ಮಿತ್ ತಂಡದ ಸೇವೆಗೆ ಲಭ್ಯರಾಗಿರುವುದು ತಂಡದ ಬ್ಯಾಟಿಂಗ್‌ಗೆ ಬಲ ಬಂದಂತಾಗಿದೆ. ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಮತ್ತು ಆಸ್ಟ್ರೇಲಿಯದ ವೇಗಿ ಆಂಡ್ರೂ ಟೈ ಅವರಂತಹ ಅನುಭವಿ ಟ್ವೆಂಟಿ-20 ತಾರೆಗಳೊಂದಿಗೆ ಜೋಫ್ರಾ ಆರ್ಚರ್ ಅವರ ಉಪಸ್ಥಿತಿಯು ಮಹತ್ವದ್ದಾಗಿದೆ.

  ರಾಯಲ್ಸ್‌ನ ಮುಖ್ಯ ಸಮಸ್ಯೆ ಇರುವುದು ಅದರಲ್ಲಿರುವ ಭಾರತದ ಆಟಗಾರರಲ್ಲಿ. ಅವರ ಪ್ರದರ್ಶನ ನಿಖರವಾಗಿ ಸ್ಥಿರವಾಗಿಲ್ಲದಿರುವುದು. ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ಜಯದೇವ್ ಉನದ್ಕಟ್ ಮತ್ತು ವರುಣ್ ಆ್ಯರನ್ ಅವರಂತಹವರು ವರ್ಷಗಳಲ್ಲಿ ನಿರೀಕ್ಷೆಗಳಿಗೆ ತಕ್ಕಂತೆ ಮಿಂಚಲು ವಿಫಲರಾಗಿದ್ದಾರೆ.

ಸಿಎಸ್‌ಕೆ ಆತ್ಮ ವಿಶ್ವಾಸದಿಂದ ಬೀಗುತ್ತಿದೆ. ಲಭ್ಯ ಸಂಪನ್ಮೂಲಗಳೊಂದಿಗೆ ಹೇಗೆ ಕೆಲಸ ಮಾಡಬೇಕೆಂದು ಕಳೆದ ಪಂದ್ಯದಲ್ಲಿ ತಂಡ ತೋರಿಸಿಕೊಟ್ಟಿದೆ. ಅತ್ಯಂತ ಯಶಸ್ವಿ ಐಪಿಎಲ್ ಬೌಲರ್ ಪಿಯೂಷ್ ಚಾವ್ಲಾ ಅವರ ಸೇರ್ಪಡೆಯೂ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News