ಮಕ್ಕಳ ಆಸ್ಪತ್ರೆ ಬಿಲ್ ಪಾವತಿಸಲು ಅಂಗಾಂಗ ಮಾರಾಟಕ್ಕೆ ಮುಂದಾದ ಮಹಿಳೆ!

Update: 2020-09-22 03:55 GMT

ಕೊಚ್ಚಿನ್, ಸೆ.22: ಮಕ್ಕಳ ಆಸ್ಪತ್ರೆ ಬಿಲ್ ಪಾವತಿಸುವ ಸಲುವಾಗಿ ಹಾಗೂ ಎಲ್ಲ ಸಾಲ ತೀರಿಸಲು ಹೃದಯ ಸೇರಿದಂತೆ ಎಲ್ಲ ಅಂಗಾಂಗಗಳನ್ನು ಮಾರಾಟ ಮಾಡಲು ತಾಯಿಯೊಬ್ಬರು ಮುಂದಾಗಿರುವ ಹೃದಯಸ್ಪರ್ಶಿ ಘಟನೆ ವರದಿಯಾಗಿದೆ.

ಸಂಚಾರದಟ್ಟಣೆಯ ಮುಳವುಕಾಡು ಕಂಟೈನರ್ ರಸ್ತೆಯಲ್ಲಿ ಮಹಿಳೆ ಈ ಕುರಿತ ನಾಮಫಲಕವನ್ನು ಪ್ರದರ್ಶಿಸಿ ಐದು ತಿಂಗಳ ಮಗುವನ್ನು ಮಳೆಯಿಂದ ರಕ್ಷಿಸಿಕೊಂಡು ಠಿಕಾಣಿ ಹೂಡಿರುವುದು ಸಾರ್ವಜನಿಕರ ಗಮನ ಸೆಳೆದಿದೆ.

ಮಲಪ್ಪುರಂ ಮೂಲದ ಮಹಿಳೆ ಎಸ್.ಶಾಂತಿ ಸದ್ಯ ವರಪ್ಪುಳ ನಿವಾಸಿ. ನೆರವು ಕೋರುವ ಕೊನೆಯ ಪ್ರಯತ್ನವಾಗಿ ರಸ್ತೆ ಬದಿ ಡೇರೆ ನಿರ್ಮಿಸಿಕೊಂಡು ಈ ವಿಶಿಷ್ಟ ಪ್ರತಿಭಟನೆಯನ್ನು ರವಿವಾರ ರಾತ್ರಿ ಆರಂಭಿಸಿದ್ದಾರೆ.

ಮೂವರು ಮಕ್ಕಳಿಗೆ ಗಂಭೀರ ಆರೋಗ್ಯ ಸಮಸ್ಯೆ ಇರುವ ಹಿನ್ನೆಲೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟವನ್ನು ಶಾಂತಿ ಎದುರಿಸುತ್ತಿದ್ದು, ಬಿಲ್ ಪಾವತಿಸಲಾಗದೇ ಕೊನೆಯದಾಗಿ ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ.

"ನಾವು ದೀರ್ಘಕಾಲದಿಂದ ಬಾಡಿಗೆ ಮನೆಯಲ್ಲಿದ್ದೇವೆ. ಈಗ ಬಾಡಿಗೆಯನ್ನೂ ಪಾವತಿಸಲಾದ ದಯನೀಯ ಸ್ಥಿತಿ ತಲುಪಿದ್ದೇವೆ. ಮೂವರು ಮಕ್ಕಳಿಗೂ ಗಂಭೀರ ಆರೋಗ್ಯ ಸಮಸ್ಯೆ ಇದ್ದು, ಕೆಲಸ ಮಾಡಲಾಗದ ಸ್ಥಿತಿ ಇದೆ. ಸುಮಾರು 20 ಲಕ್ಷ ರೂ.ನಷ್ಟಿರುವ ಸಾಲ ತೀರಿಸುವ ಸಲುವಾಗಿ ದಾನಿಗಳ ನೆರವು ಯಾಚಿಸಿದ್ದೇವೆ. ಆದರೆ ನಮಗೆ ಈಗ ಎಲ್ಲ ಬಾಗಿಲುಗಳು ಮುಚ್ಚಿವೆ" ಎಂದು ಶಾಂತಿ ಅಳಲು ತೋಡಿಕೊಂಡರು.

25 ವರ್ಷ ವಯಸ್ಸಿನ ಹಿರಿಮಗ ರಾಜೇಶ್ ಅಪಘಾತಕ್ಕೀಡಾಗಿ ಮೆದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. 23 ವರ್ಷದ ರಂಜಿತ್‌ಗೆ ಹೊಟ್ಟೆಯಲ್ಲಿ ಟ್ಯೂಮರ್ ಆಗಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ. 21 ವರ್ಷದ ಸಾಜಿತ್ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ. ಕೋವಿಡ್-19 ಸಾಂಕ್ರಾಮಿಕದಿಂದಾಗಿ ಚಿತ್ರಮಂದಿರ ಮುಚ್ಚಿರುವುದರಿಂದ ಕೆಲಸ ಕಳೆದುಕೊಂಡಿದ್ದಾನೆ. 11 ವರ್ಷದ ಮಗಳು ಇತ್ತೀಚೆಗೆ ಅಪಘಾತದಲ್ಲಿ ಗಾಯಗೊಂಡಿದ್ದು, ನರ ಶಸ್ತ್ರಚಿಕಿತ್ಸೆ ಆಗಬೇಕಿದೆ. ಮತ್ತೊಂದು ಮಗು ಶಾಲೆಗೆ ಹೋಗುತ್ತಿದೆ.

"ನಾನು ವಾಹನ ಚಾಲನೆ ಹೇಳಿಕೊಡುತ್ತಿದ್ದೆ. ಕೋವಿಡ್-19ನಿಂದಾಗಿ ಉದ್ಯೋಗ ಕಳೆದುಕೊಳ್ಳಬೇಕಾಯಿತು. ಆ ಬಳಿಕ ಆದಾಯದ ಮೂಲ ಹುಡುಕುತ್ತಿದ್ದೇನೆ. ಪತಿ ಬಹಳ ಹಿಂದೆಯೇ ಬಿಟ್ಟುಹೋಗಿದ್ದಾರೆ. ಮಗಳ ಜೀವ ಉಳಿಸಲು ಹಣ ಅನಿವಾರ್ಯವಾಗಿದೆ" ಎಂದು ಶಾಂತಿ ಹೇಳುತ್ತಾರೆ.

ಪೊಲೀಸರು ಮಧ್ಯಪ್ರವೇಶಿಸಿ ಮಹಿಳೆಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಎರ್ನಾಕುಲಂ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳು ಸಮಾಧಾನಪಡಿಸಿದ ಬಳಿಕ ಮಹಿಳೆ ತನ್ನ ಬಾಡಿಗೆ ಮನೆಗೆ ವಾಪಸ್ಸಾಗಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News