ಸುಗ್ರೀವಾಜ್ಞೆಗೆ ವಿರೋಧ: ಮುಂದುವರಿದ ರೈತ, ಕಾರ್ಮಿಕ, ದಲಿತ ಸಂಘಟನೆಗಳ ಅಹೋರಾತ್ರಿ ಧರಣಿ

Update: 2020-09-22 15:54 GMT

ಬೆಂಗಳೂರು, ಸೆ.22: ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ಸೇರಿ ಇನ್ನಿತರೆ ಕಾಯ್ದೆಗಳ ಸುಗ್ರೀವಾಜ್ಞೆ ವಿರೋಧಿಸಿ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರವೂ ಮುಂದುವರಿಯಿತು.

ಸೋಮವಾರ ಮಧ್ಯಾಹ್ನದಿಂದ ಇಲ್ಲಿನ ಸ್ವಾತಂತ್ರ್ಯ ಉದ್ಯಾನದ ದೇವರಾಜ್ ಅರಸು ವೇದಿಕೆಯಲ್ಲಿ ಆರಂಭವಾದ ಪರ್ಯಾಯ ಅಧಿವೇಶನಗಳು ಮಂಗಳವಾರ ದಿನಪೂರ್ತಿ ಮುಂದುವರಿದಿದ್ದು, ಬಡವರ ಭೂಮಿ ಮತ್ತು ವಸತಿ ಸಮಸ್ಯೆಗಳ ಕುರಿತು ಚಿಂತಕರು, ಹೋರಾಟಗಾರರು ಹಾಗೂ ರೈತರು ಬೆಳಕು ಚೆಲ್ಲಿದರು.

ಮತ್ತೊಂದೆಡೆ ಇದೇ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ಕಾರ್ಮಿಕರು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಆಕ್ರೋಶ ಹೊರಹಾಕಿ, ಘೋಷಣೆಗಳನ್ನು ಕೂಗಿದರು.

ಹಕ್ಕೊತ್ತಾಯಗಳು: ಯಾವುದೇ ಕಾರಣಕ್ಕೂ ಬಡ ಜನರನ್ನು ಕನಿಷ್ಠ ಪರ್ಯಾಯ ವ್ಯವಸ್ಥೆಯನ್ನಾದರೂ ಮಾಡದೆ ಅವರ ಭೂಮಿಯಿಂದಾಗಲೀ, ಮನೆಗಳಿಂದಾಗಲೀ ಒಕ್ಕಲೆಬ್ಬಿಸಬಾರದು. ಫಾರಂ ಸಂಖ್ಯೆ 50, 57, 94ಸಿ, 94ಸಿಸಿ ಮತ್ತು ಅರಣ್ಯ ಹಕ್ಕು ಅರ್ಜಿಗಳನ್ನು ನವೆಂಬರ್ ಅಧಿವೇಶನದೊಳಗಾಗಿ ಇತ್ಯರ್ಥಗೊಳಿಸಿ ಬಡಜನರಿಗೆ ಹಕ್ಕುಪತ್ರ ನೀಡಬೇಕು. ಅದೇ ರೀತಿ, ಒಟ್ಟು ಸರ್ಕಾರಿ ಭೂಮಿಯ ಆಡಿಟಿಂಗ್ ನಡೆಸಬೇಕು. ಲಭ್ಯವಿರುವ ಭೂಮಿಯನ್ನು ನಿವೇಶನಕ್ಕಾಗಿ ಮತ್ತು ಉಳುಮೆಗಾಗಿ ಕೂಡಲೇ ವಿತರಣೆ ಮಾಡಬೇಕು. ರೈತ ವಿರೋಧಿ, ದಲಿತ ವಿರೋಧಿ, ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳನ್ನು ಈ ಕೂಡಲೇ ರದ್ದುಗೊಳಿಸಬೇಕು. ಅಂತಹ ಕಾಯ್ದೆಯ ತಿದ್ದುಪಡಿಯ ಎಲ್ಲ ಪ್ರಸ್ತಾಪಗಳನ್ನು ಕೈಬಿಡಬೇಕು.

ಭೂಮಿಯು ಉಳುವವರಿಗೆ ಮತ್ತು ವಾಸಿಸುವವರಿಗೆ ಸೇರಿದ್ದು, ಭೂಗಳ್ಳರಿಗಲ್ಲ, ಕಂಪನಿಗಳಿಗಲ್ಲ. ಕೊರೋನದಿಂದ ತತ್ತರಿಸುವ ರೈತರ ಮತ್ತು ಕಾರ್ಮಿಕರ ನೆರವಿಗೆ ಸರಕಾರ ಸಮಗ್ರ ಪ್ಯಾಕೇಜ್ ಘೋಷಿಸಬೇಕೆಂದು ಪರ್ಯಾಯ ಅಧಿವೇಶನ ಮೂಲಕ ಹಕ್ಕೊತ್ತಾಯಗಳು ಮಂಡಿಸಲಾಯಿತು.

ಪರ್ಯಾಯ ಅಧಿವೇಶನದಲ್ಲಿ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ, ಮಾರುತಿ ಮಾನ್ಪಡೆ, ಕುರುಬೂರು ಶಾಂತಕುಮಾರ್, ಆರ್.ಮಾನಸಯ್ಯ, ನೂರ್ ಶ್ರೀಧರ್, ಗಾಯತ್ರಿ, ನರಸಿಂಹಮೂರ್ತಿ, ಡಾ.ಕಾವೇರಿ, ಜನಾರ್ದನ್, ನ್ಯಾಯವಾದಿ ರವೀಂದ್ರ ನಾಯ್ಕ್, ಅಮೀನ್ ಮೊಹ್ಸಿನ್, ಡಿ.ಎಚ್.ಪೂಜಾರ್, ಮರಿಯಪ್ಪ, ಸ್ವರ್ಣ ಭಟ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಪ್ರತಿಪಕ್ಷಗಳ ಬೆಂಬಲ

ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟಕ್ಕೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲ ವ್ಯಕ್ತಪಡಿಸಿತು. ಪರ್ಯಾಯ ಅಧಿವೇಶನದಲ್ಲಿ ಪಾಲ್ಗೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಇನ್ನಿತರೆ ನಾಯಕರು, ಸುಗ್ರೀವಾಜ್ಞೆಗಳ ವಿರುದ್ಧ ಸದನದಲ್ಲೂ ಧ್ವನಿಗೂಡಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News