ಭೂಮಿ ಕಿತ್ತುಕೊಳ್ಳುವ ಮಸೂದೆ ಮೇಲ್ಮನೆಯಲ್ಲಿ ಅಂಗೀಕಾರ ಆಗುವುದಿಲ್ಲ: ಸಿದ್ದರಾಮಯ್ಯ

Update: 2020-09-22 15:09 GMT

ಬೆಂಗಳೂರು, ಸೆ.22: ವಿಧಾನ ಪರಿಷತ್ತಿನಲ್ಲಿ ಬಿಜೆಪಿಗೆ ಬಹುಮತ ಇಲ್ಲ. ಹಾಗಾಗಿ, ಕಾಂಗ್ರೆಸ್ ಜೊತೆಗೆ ಜೆಡಿಎಸ್ ಸದಸ್ಯರು ಇದನ್ನು ವಿರೋಧಿಸಿದರೆ ಭೂಮಿ ಕಿತ್ತುಕೊಳ್ಳುವ ಈ ಮಸೂದೆ ಅಂಗೀಕಾರ ಆಗುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟದ ಜನತಾ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಉಳುವವನೇ ಭೂಮಿಯ ಒಡೆಯ ಎಂದು ಕಾನೂನು ಜಾರಿಗೊಳಿಸಿದರು. ಆದರೆ, ಇದೀಗ ದುಡ್ಡಿದ್ದವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ಹೊರಟಿದ್ದು, ಇದನ್ನು ರೈತರ ಮಕ್ಕಳಾದ ನಾವು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಈಗಿನ ಸರಕಾರ ಜಮೀನ್ದಾರಿ ಪದ್ಧತಿ ಮತ್ತೆ ಮುನ್ನೆಲೆಗೆ ಬರುವಂತೆ ಸಂಚು ರೂಪಿಸಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವೆ ಸಮರ ನಡೆಯುತ್ತಿದೆ. ನಮ್ಮ ಧ್ವನಿಯನ್ನು ದಮನಿಸಲು ಈ ಸರಕಾರ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯಸಭೆಯ ಸದಸ್ಯರನ್ನು ಅಮಾನತುಗೊಳಿಸಿ ಮಸೂದೆ ಪಾಸು ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಅವರು, ಈ ಹಿಂದೆ ಕೃಷಿ ವಲಯದಲ್ಲಿ ಆದಾಯ ಹೆಚ್ಚಾಗಿತ್ತು. ಕೈಗಾರಿಕಾ ವಲಯ ಮತ್ತು ಸೇವಾ ವಲಯಗಳ ಪಾಲು ಕಡಿಮೆಯಿತ್ತು. ಆದರೆ, ಬರುಬರುತ್ತಾ ಕೃಷಿ ಆದಾಯ ಕಡಿಮೆಯಾಗಿ, ಕೈಗಾರಿಕಾ ಮತ್ತು ಸೇವಾ ವಲಯದ ಆದಾಯ ಹೆಚ್ಚಾಯಿತು. ಆದರೆ, ಇಂದು ಎಲ್ಲದರ ಆದಾಯವೂ ಕಡಿಮೆಯಾಗಿದೆ ಇದಕ್ಕೆಲ್ಲ ಮೋದಿ ಸರಕಾರದ ಅವೈಜ್ಞಾನಿಕ ನೀತಿಗಳೇ ಕಾರಣ ಎಂದು ಸಿದ್ದರಾಮಯ್ಯ ದೂರಿದರು.

ಸಣ್ಣ ರೈತರು ತಮ್ಮ ಜಮೀನನ್ನು ಮಾರಿ, ಅದೇ ಜಮೀನಿನಲ್ಲಿ ಈಗ ಕೂಲಿ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಗಳು ನಿರ್ಮಾಣ ಆಗುವುದನ್ನು ತಡೆಯಬೇಕು. ಭೂಮಿಯ ಹಕ್ಕು ರೈತರದ್ದು .ಭೂಮಿಯ ಹಕ್ಕು ಕಾರ್ಮಿಕರದ್ದು, ದಲಿತರದ್ದು, ಬಡವರದ್ದು. ಯಾವತ್ತಿಗೂ ಭೂಮಿಯ ಹಕ್ಕನ್ನು ಬಿಟ್ಟುಕೊಡಬಾರದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News