ಸರಕಾರದಿಂದ ಖಾಸಗಿ ಆಸ್ಪತ್ರೆಗೆ ದಾಖಲಾದ ಕೋವಿಡ್ ರೋಗಿಗಳ ಚಿಕಿತ್ಸಾ ವೆಚ್ಚ ಭರಿಸುತ್ತಿದ್ದೇವೆ: ಡಾ.ಕೆ.ಸುಧಾಕರ್

Update: 2020-09-22 16:22 GMT

ಬೆಂಗಳೂರು, ಸೆ.22: ಸರಕಾರದ ಮೂಲಕ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ದಾಖಲಾದವರ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಕೋವಿಡ್ ಚಿಕಿತ್ಸೆ ಹೆಸರಿನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ನಿಯಮ 69ರ ಅಡಿ ಪ್ರಸ್ತಾಪಿಸಿದ ವಿಷಯಗಳಿಗೆ ಮಂಗಳವಾರ ಅವರು ಸ್ಪಷ್ಟೀಕರಣ ನೀಡಿದರು.

ಚರ್ಚೆ ವೇಳೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಕೊರೋನ ಚಿಕಿತ್ಸೆ ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚು ಹಣ ಪಡೆಯಲಾಗುತ್ತಿದೆ. ನಾನು ಸೋಂಕಿತನಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾಗ ನನಗೆ 1.66 ಲಕ್ಷ ರೂ.ಬಿಲ್ ಮಾಡಿದ್ದಾರೆ. ಇನ್ನೂ ಸಾಮಾನ್ಯ ಜನರ ಪಾಡೇನು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ಕೊರೋನ ಚಿಕಿತ್ಸೆಯಲ್ಲಿ ಎರಡು ವಿಧಗಳಿವೆ. ಕೋವಿಡ್ ದೃಢವಾದ ಕೂಡಲೇ ಬಿಬಿಎಂಪಿ ಮೂಲಕ ನೋಂದಣಿ ಮಾಡಿಕೊಂಡು ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ದಾಖಲಾದರೆ, ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರಕಾರ ಭರಿಸಲಿದೆ. ಸರಕಾರದಲ್ಲಿ ನೋಂದಣಿ ಮಾಡಿಕೊಳ್ಳದೇ, ನೇರವಾಗಿ ಅವರೇ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಅಂತಹವರು ಚಿಕಿತ್ಸಾ ವೆಚ್ಚವನ್ನು ಅವರೇ ಭರಿಸಬೇಕು. ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚು ಶುಲ್ಕ ವಿಧಿಸುತ್ತಿರುವುದು ಗಮನಕ್ಕೆ ಬಂದ ಕೂಡಲೇ, ಖಾಸಗಿಯವರಿಗೂ ಕೊರೋನ ಚಿಕಿತ್ಸಾ ವೆಚ್ಚವನ್ನು ನಿಗದಿ ಮಾಡಿದ್ದೇವೆ ಎಂದು ಉತ್ತರಿಸಿದರು.

ಸರಕಾರ ತಪ್ಪು ಮಾಹಿತಿ ನೀಡಲ್ಲ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುತ್ತಾ, ಸರಕಾರ ಕೊರೋನ ಸೋಂಕಿನ ಅಂಕಿ ಅಂಶ ಹಾಗೂ ಸಾವಿನ ಅಂಕಿ ಅಂಶವನ್ನು ತಪ್ಪಾಗಿ ನೀಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ನಮ್ಮ ಸರಕಾರ ಪ್ರಾರಂಭದಿಂದ ಈವರೆಗೂ ಒಂದು ಅಂಕಿಯನ್ನೂ ತಪ್ಪಾಗಿ ನೀಡಿಲ್ಲ. ಸರಕಾರ ತಪ್ಪು ಮಾಹಿತಿ ಕೊಡುತ್ತದೆ ಎಂದು ಆರೋಪ ಮಾಡುವ ಮೊದಲು, ನೀವು ಸಹ ಸರಕಾರ ನಡೆಸಿದವರು ಎಂಬುದನ್ನು ಮರೆಯಬೇಡಿ. ಪ್ರಸ್ತುತ ರಾಜ್ಯದಲ್ಲಿ ಕೊರೋನ ಸಾವಿನ ಪ್ರಮಾಣ ಶೆ.1.56 ರಷ್ಟಿದೆ, ಇದು ದೇಶದ ಸಾವಿನ ಪ್ರಮಾಣಕ್ಕಿಂತ ಕಡಿಮೆ ಇದೆ ಎಂಬುದು ಗಮನಾರ್ಹ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News