ಭಾರತಕ್ಕೆ ಬಾರದ ರಫೇಲ್ ಉನ್ನತ ತಂತ್ರಜ್ಞಾನ: ಸಿಎಜಿ ಆಕ್ಷೇಪ

Update: 2020-09-24 04:15 GMT

ಹೊಸದಿಲ್ಲಿ : ಭಾರತಕ್ಕೆ 59 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಪೂರೈಸುವ ಒಪ್ಪಂದದಲ್ಲಿ ಪ್ರಮುಖ ಕಂಪನಿಗಳಾದ ಡಸಲ್ಟ್ ಏವಿಯೇಶನ್ ಮತ್ತು ಎಂಬಿಡಿಎ, ಭಾರತಕ್ಕೆ ಉನ್ನತ ತಂತ್ರಜ್ಞಾನವನ್ನು ಪೂರೈಸುವ ಬದ್ಧತೆಯನ್ನು ಈಡೇರಿಸುವಲ್ಲಿ ವಿಫಲವಾಗಿವೆ ಎಂದು ಭಾರತದ ಅತ್ಯುನ್ನತ ಲೆಕ್ಕಪರಿಶೋಧನಾ ವ್ಯವಸ್ಥೆಯಾದ ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್ ತಮ್ಮ ವರದಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಒಪ್ಪಂದದ ಅನ್ವಯ ಫ್ರಾನ್ಸ್‌ನ ಉಭಯ ಕಂಪನಿಗಳು ಒಟ್ಟು ಗುತ್ತಿಗೆ ಮೌಲ್ಯದ ಶೇಕಡ 50ರಷ್ಟನ್ನು ಭಾರತದ ಆಫ್‌ಸೆಟ್ ಕಂಪನಿಗಳಲ್ಲಿ ಮರುಹೂಡಿಕೆ ಮಾಡಬೇಕು. ಬುಧವಾರ "ಮ್ಯಾನೇಜ್‌ಮೆಂಟ್ ಆಫ್ ಡಿಫೆನ್ಸ್ ಆಫ್‌ಸೆಟ್ಸ್" ಎಂಬ ಸಿಎಜಿ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಈ ವರದಿಯಲ್ಲಿ ಸಿಎಜಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2015ರ ಸೆಪ್ಟೆಂಬರ್‌ನಲ್ಲಿ ಉಭಯ ಕಂಪನಿಗಳು ನೀಡಿದ್ದ ಆರಂಭಿಕ ಭರವಸೆಯಂತೆ, ಡಿಆರ್‌ಡಿಓಗೆ "ಅತ್ಯುನ್ನತ ತಂತ್ರಜ್ಞಾನ" ಪೂರೈಸುವ ಮೂಲಕ ಆಫ್‌ಸೆಟ್ ಬದ್ಧತೆಯ ಶೇಕಡ 30ರಷ್ಟು ಈಡೇರಿಸಬೇಕಿತ್ತು. ಆದರೆ ಇದರಲ್ಲಿ ಕಂಪನಿಗಳು ವಿಫಲವಾಗಿವೆ ಎಂದು ವಿವರಿಸಿದ್ದಾರೆ.

ಆದರೆ ಈ ಭರವಸೆಗಳನ್ನು ಈಡೇರಿಸಲು ಒಪ್ಪಂದಕ್ಕೆ ಸಹಿ ಮಾಡಿದ ದಿನದಿಂದ ಏಳು ವರ್ಷಗಳ ಕಾಲಾವಕಾಶವಿದ್ದು, ಮೊದಲ ಮೂರು ವರ್ಷಗಳಿಗೆ ಇಂಥ ಯಾವುದೇ ಬದ್ಧತೆ ಇರುವುದಿಲ್ಲ ಎಂದೂ ವರದಿ ಸ್ಪಷ್ಟಪಡಿಸಿದೆ.

ಆದಾಗ್ಯೂ ಒಪ್ಪಂದದ ಅನ್ವಯ ಎಂಬಿಡಿಎಯ ಒಟ್ಟು ಬದ್ಧತೆಯ ಶೇಕಡ 57ನ್ನು ಹಾಗೂ ಡಸಲ್ಟ್‌ನ ಒಟ್ಟು ಬದ್ಧತೆಯ ಶೇಕಡ 58ನ್ನು ಮಾತ್ರ ಕೊನೆಯ ಅಥವಾ ಏಳನೇ ವರ್ಷದಲ್ಲಿ (2023) ಈಡೇರಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಹಲವು ರಕ್ಷಣಾ ಒಪ್ಪಂದಗಳ ಬಗ್ಗೆ ಸಿಎಜಿ ಪರಾಮರ್ಶೆ ನಡೆಸಿದ್ದರೂ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಸಮರಕ್ಕೆ ವೇದಿಕೆ ಕಲ್ಪಿಸಿಕೊಟ್ಟ ರಫೇಲ್ ಒಪ್ಪಂದದ ಬಗೆಗಿನ ಅಭಿಪ್ರಾಯ ವಿಶೇಷ ಮಹತ್ವ ಪಡೆದಿದೆ. 36 ಯುದ್ಧ ವಿಮಾನ ಪೂರೈಕೆ ಒಪ್ಪಂದದ ಬಗ್ಗೆ ತನಿಖೆ ನಡೆಸಬೇಕು ಎಂದು ಸಲ್ಲಿಸಲಾಗಿದ್ದ, ಪರಾಮರ್ಶೆ ಅರ್ಜಿಯನ್ನು ಸುಪ್ರೀಂಕೋರ್ಟ್ ಕಳೆದ ನವೆಂಬರ್‌ನಲ್ಲಿ ತಿರಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News