ದಿಲ್ಲಿ ದಂಗೆಯ ಚಾರ್ಜ್ ಶೀಟ್ ನಲ್ಲಿ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್

Update: 2020-09-24 18:51 GMT

ಹೊಸದಿಲ್ಲಿ, ಸೆ. 24: ದಿಲ್ಲಿಯಲ್ಲಿ ಫೆಬ್ರವರಿಯಲ್ಲಿ ಸಂಭವಿಸಿದ ಕೋಮು ಗಲಭೆಗೆ ಸಂಬಂಧಿಸಿ ದಿಲ್ಲಿ ಪೊಲೀಸರು ಸಲ್ಲಿಸಿದ ಹೊಸ ಆರೋಪ ಪಟ್ಟಿಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್, ಕಾಂಗ್ರೆಸ್ ವಕ್ತಾರ ಹಾಗೂ ಮಾಜಿ ಸಂಸದ ಡಾ. ಉದಿತ್ ರಾಜ್ ಹಾಗೂ ಸಿಪಿಎಂ ನಾಯಕಿ ಬೃಂದಾ ಕಾರಟ್ ಅವರ ಹೆಸರು ಉಲ್ಲೇಖಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಸಂದರ್ಭ ಸಲ್ಮಾನ್ ಖುರ್ಷಿದ್, ಡಾ. ಉದಿತ್ ರಾಜ್ ಹಾಗೂ ಬೃಂದಾ ಕಾರಟ್ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ದಿಲ್ಲಿ ಪೊಲೀಸರು ಆರೋಪಿಸಿದ್ದಾರೆ. ಆದರೆ, ಪ್ರಚೋದನಕಾರಿ ಭಾಷಣದ ಖಚಿತ ಲಕ್ಷಣವನ್ನು ಪೊಲೀಸರು ಉಲ್ಲೇಖಿಸಿಲ್ಲ.

ದಿಲ್ಲಿ ಗಲಭೆಗೆ ಸಂಬಂಧಿಸಿ ಕಾಂಗ್ರೆಸ್‌ನ ಮಾಜಿ ಕೌನ್ಸಿಲರ್ ಇಸ್ರತ್ ಜಹಾನ್ ಹಾಗೂ ಸಂರಕ್ಷಿತ ಸಾಕ್ಷಿಯನ್ನು ಪೊಲೀಸರು ಉಲ್ಲೇಖಿಸಿದ್ದಾರೆ. ಇಸ್ರತ್ ಜಹಾನ್ ಹಾಗೂ ಸಂರಕ್ಷಿತ ಸಾಕ್ಷಿ ಪ್ರಚೋದನಕಾರಿ ಭಾಷಣಗಳ ಬಗೆಗಿನ ವಿವರಗಳನ್ನು ತಮ್ಮ ಹೇಳಿಕೆಗಳಲ್ಲಿ ಬಹಿರಂಗಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ಸೆಪ್ಟಂಬರ್ 17ರಂದು ಸಲ್ಲಿಸಲಾದ 17 ಸಾವಿರ ಪುಟಗಳ ಆರೋಪ ಪಟ್ಟಿ ‘‘ಉಮರ್ ಖಾಲಿದ್, ಸಲ್ಮಾನ್ ಖುರ್ಷಿದ್, ನದೀಮ್....ಮೊದಲಾದವರು ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾರೆ ಹಾಗೂ ಜನರನ್ನು ಸಜ್ಜುಗೊಳಿಸಿದ್ದಾರೆ’’ ಎಂದು ಸಂರಕ್ಷಿತ ಸಾಕ್ಷಿ ನೀಡಿದ ಹೇಳಿಕೆಯನ್ನು ಒಳಗೊಂಡಿದೆ.

ಖುರೇಜಿಯಯಲ್ಲಿ ಸಿಎಎ/ಎನ್‌ಪಿಆರ್/ಎನ್‌ಆರ್‌ಸಿ ವಿರುದ್ಧ ಭಾಷಣ ಮಾಡಲು ಉದಿತ್ ರಾಜ್, ಸಲ್ಮಾನ್ ಖುರ್ಷಿದ್ ಹಾಗೂ ಬೃಂದಾ ಕಾರಟ್, ಉಮರ್ ಖಾಲಿದ್‌ರಂತಹ ಗಣ್ಯರು ಆಗಮಿಸಿದ್ದರು ಎಂದು ಸಾಕ್ಷಿ ಆರೋಪಿಸಿದ್ದಾರೆ.

 ಸಿಎಎ ವಿರೋಧಿ ಪ್ರತಿಭಟನೆ ಉಳಿಸಿಕೊಳ್ಳುವ ಸಲುವಾಗಿ ಜಾಮಿಯಾ ಸಮನ್ವಯ ಸಮಿತಿಯ ಸೂಚನೆಯಂತೆ ಸಲ್ಮಾನ್ ಖುರ್ಷಿದ್, ಚಿತ್ರನಿರ್ದೇಶಕ ರಾಹುಲ್ ರಾಯ್, ಭೀಮ್ ಆರ್ಮಿಯ ಹಿಮಾಂಶು ಅವರಂತಹ ಪ್ರಸಿದ್ಧ ವ್ಯಕ್ತಿಗಳನ್ನು ತಾನು ಹಾಗೂ ಹೋರಾಟಗಾರ ಖಾಲಿದ್ ಸೈಫಿ ಆಹ್ವಾನಿಸಿದ್ದೆವು ಎಂದು ಇರ್ಷತ್ ಜಹಾನ್ ತನ್ನ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಆರೋಪ ಪಟ್ಟಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News