ಹಿರಿಯ ಪೊಲೀಸ್ ಅಧಿಕಾರಿ ಬಳಿ 70 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ : ಎಸಿಬಿಯಿಂದ ಎಫ್‍ಐಆರ್

Update: 2020-09-24 09:28 GMT

ಹೈದರಾಬಾದ್ :  ತೆಲಂಗಾಣ ರಾಜ್ಯದ ವಿವಿಧೆಡೆ  ರೂ 70 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಹಿರಿಯ ಪೊಲೀಸ್ ಅಧಿಕಾರಿ, ಯೆಲ್ಮಕುರಿ ನರಸಿಂಹ ರೆಡ್ಡಿ  ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಬ್ಯುರೋ (ಎಸಿಬಿ) ಪ್ರಕರಣ ದಾಖಲಿಸಿದೆ. ರಾಜ್ಯದ ವಿವಿಧೆಡೆ ನಡೆಸಿದ ದಾಳಿಗಳಲ್ಲಿ ಈ ಪೊಲೀಸ್ ಅಧಿಕಾರಿಯ ಅಕ್ರಮ ಆಸ್ತಿ ಪತ್ತೆಯಾಗಿತ್ತು.  ರೆಡ್ಡಿ ರಾಜ್ಯದ ಮಲ್ಕಜ್ಗಿರಿ ವಿಭಾಗದಲ್ಲಿರುವ ರಚಕೊಂಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಎಸಿಪಿಯಾಗಿದ್ದಾರೆ.

ಸರಕಾರ ನಿಗದಿ ಪಡಿಸಿದ ಆಸ್ತಿ ಮೌಲ್ಯಗಳನ್ನು ಪರಿಗಣಿಸಿದಾಗ ರೆಡ್ಡಿ ಬಳಿಯಿರುವ ಅಕ್ರಮ ಆಸ್ತಿ ಗಳಿಕೆಯ ಮೌಲ್ಯ ರೂ 7.5 ಕೋಟಿಯಾಗಿದ್ದರೂ ಸ್ಥಳೀಯ ಮಾರುಕಟ್ಟೆಯಲ್ಲಿ ಈ ಆಸ್ತಿಗಳ ಮೌಲ್ಯ  ಅಂದಾಜು ರೂ 70 ಕೋಟಿ ಎಂದು ಎಸಿಬಿ ಹೇಳಿದೆ.

ಖಚಿತ ಮಾಹಿತಿಯ ಮೇರೆಗೆ ಎಸಿಬಿ ಅಧಿಕಾರಿಗಳು  ಹೈದರಾಬಾದ್, ವಾರಂಗಲ್, ಜಂಗೌನ್, ನಲ್ಗೊಂದ, ಕರೀಂನಗರ್ ಜಿಲ್ಲೆಗಳ ಸುಮಾರು 25 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಆಂಧ್ರ ಪ್ರದೇಶದ ಅನಂತಪುರ್ ಜಿಲ್ಲೆಯಲ್ಲೂ ದಾಳಿ ನಡೆದಿತ್ತು.

ರೆಡ್ಡಿ ಅವರ ಒಡೆತನದಲ್ಲಿ ಅನಂತಪುರದಲ್ಲಿ 55 ಎಕರೆ ಕೃಷಿ ಭೂಮಿ, ಮಾಧಪುರ್ ಎಂಬಲ್ಲಿ 1,960 ಚದರ ಯಾರ್ಡ್‍ಗಳ ನಾಲ್ಕು   ಜಮೀನು, ಹಫೀಝ್‍ಪೇಟೆಯಲ್ಲೂ ಜಮೀನು,  ಎರಡು ಮನೆ, ರೂ 15 ಲಕ್ಷ ನಗದು,  ಎರಡು ಬ್ಯಾಂಕ್ ಲಾಕರುಗಳು, ರಿಯಲ್ ಎಸ್ಟೇಟ್‍ನಲ್ಲಿ ಹೂಡಿಕೆ ಹಾಗೂ ಇತರ ಉದ್ಯಮಗಳಲ್ಲಿ ಅವರು ಹೂಡಿಕೆ ಮಾಡಿರುವುದು ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News