ಪುರೋಗಾಮಿ ಚಿಂತನೆಯ ಇಸ್ಲಾಮಿಕ್ ವಿದ್ವಾಂಸ ಬೇಕಲ್ ಉಸ್ತಾದ್

Update: 2020-09-24 18:31 GMT

‘ಬೇಕಲ್ ಉಸ್ತಾದ್’ ಎಂದೇ ಜನಪ್ರಿಯರಾಗಿದ್ದ ನಮ್ಮನ್ನಗಲಿದ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಹತ್ತು ಹಲವು ಕಾರಣಗಳಿಗಾಗಿ ಕರಾವಳಿ ಕರ್ನಾಟಕ, ಕಾಸರಗೋಡು ಮತ್ತು ಮಲೆನಾಡು ಭಾಗದ ಮುಸ್ಲಿಮರಿಗೆ ಮಾನಸಿಕವಾಗಿ ಬಹು ಆಪ್ತರಾಗಿದ್ದವರು. ಅವರು ನಿಸ್ಸಂಶಯವಾಗಿಯೂ ಭಾರತದ ಸಮಕಾಲೀನ ಇಸ್ಲಾಮಿಕ್ ವಿದ್ವಾಂಸರಲ್ಲಿ ಅಗ್ರಮಾನ್ಯರ ಪಟ್ಟಿಯಲ್ಲಿ ನಿಲ್ಲುವವರಾಗಿದ್ದರು. ಇಸ್ಲಾಮೀ ಕರ್ಮಶಾಸ್ತ್ರ, ಖಗೋಳ ಶಾಸ್ತ್ರ, ಹದೀಸ್ (ಪ್ರವಾದಿ ವಚನ), ತಾರೀಕ್ (ಇತಿಹಾಸ) ಮುಂತಾದ ವಿವಿಧ ಜ್ಞಾನಶಾಖೆಗಳಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದರು.

ಅವರ ಪಾಂಡಿತ್ಯದ ಆಳವನ್ನರಿಯಲು ಒಂದು ಘಟನೆಯನ್ನು ಗಮನಿಸೋಣ...

ಇಸ್ಲಾಮಿನಲ್ಲಿ ದಾನಕ್ಕೆ ಅತ್ಯಂತ ಮಹತ್ವವಿದೆಯಾದರೂ ರಕ್ತದಾನದ ಬಗ್ಗೆ ಇಸ್ಲಾಮೀ ವಿದ್ವಾಂಸರ ಮಧ್ಯೆ ಭಿನ್ನಾಭಿಪ್ರಾಯಗಳಿದ್ದವು. ಇಸ್ಲಾಮೀ ಕರ್ಮಶಾಸ್ತ್ರದ ಪ್ರಕಾರ ರಕ್ತವನ್ನು ಅಶುದ್ಧಿ (ನಜಸ್) ಎಂದು ಪರಿಗಣಿಸಲಾಗುತ್ತದೆ. ಯಾವುದೇ ವಿಧದ ರಕ್ತ ಲೇಪಿತ ಸ್ಥಳವನ್ನು ಶುದ್ಧೀಕರಿಸದೇ ನಮಾಝ್ ಮಾಡುವಂತಿಲ್ಲ. ಇಸ್ಲಾಮಿನಲ್ಲಿ ದಾನವು ಅತ್ಯಂತ ಪುಣ್ಯ ಕಾರ್ಯವಾಗಿದೆ. ದಾನ ಮಾಡುವ ವಸ್ತು ಶುದ್ಧವಾಗಿರಬೇಕು. ಒಂದು ವೇಳೆ ಸಂಪತ್ತನ್ನು ದಾನ ಮಾಡುವುದಾದರೆ ಅದು ನ್ಯಾಯಬದ್ಧ ಹಾದಿಯಲ್ಲಿ ಸಂಪಾದಿಸಿದ ಸಂಪತ್ತಾಗಿರಬೇಕು. ಹೀಗಿರುವಾಗ ಅಶುದ್ಧ ಎಂದು ಪರಿಗಣಿಸಲ್ಪಡುವ ರಕ್ತದ ದಾನ ಸರಿಯಲ್ಲ ಎಂಬ ಅಭಿಪ್ರಾಯವೂ ಅನೇಕ ಇಸ್ಲಾಮಿಕ್ ವಿದ್ವಾಂಸರಲ್ಲಿತ್ತು. ಆದರೆ ರಕ್ತಕ್ಕೆ ಪರ್ಯಾಯ ರಕ್ತವೇ ಹೊರತು ಬೇರಾವುದೂ ಇಲ್ಲ. ಸೂಕ್ತ ಸಮಯಕ್ಕೆ ರಕ್ತ ಸಿಗದೇ ಅನೇಕ ರೋಗಿಗಳು, ಅಪಘಾತದ ಗಾಯಾಳುಗಳು ಮರಣ ಹೊಂದುತ್ತಿರುವಾಗ ಜೀವ ರಕ್ಷಣೆಗಾಗಿ ನಾವೇನು ಮಾಡಬಹುದು ಎಂಬ ಸಂಕೀರ್ಣ ಸ್ಥಿತಿಯಲ್ಲಿ ಮುಸ್ಲಿಮ್ ಸಮುದಾಯವಿತ್ತು.

ಅಂತಹ ಸಂದರ್ಭದಲ್ಲಿ ಮುಸ್ಲಿಮರಿಗೆ ಪ್ರಾಣ ರಕ್ಷಣೆಯು ಒಂದು ಧಾರ್ಮಿಕ ಕರ್ತವ್ಯವಾಗಿದೆ. ಪವಿತ್ರ ಕುರ್‌ಆನ್ ಬಹಳ ಸ್ಪಷ್ಟವಾಗಿ ಭೂಮಿಯಲ್ಲಿ ಕ್ಷೋಭೆಯುಂಟು ಮಾಡಿದ ಕಾರಣಕ್ಕಲ್ಲದೇ ಮತ್ತು ಮನುಷ್ಯನೊಬ್ಬನ ಕೊಲೆಗೆ ಬದಲಾಗಿಯಲ್ಲದೇ ಒಬ್ಬ ಮನುಷ್ಯನನ್ನು ಕೊಂದರೆ ಆತ ಸಂಪೂರ್ಣ ಮನುಕುಲದ ಹಂತಕನಾಗುತ್ತಾನೆ, ಒಬ್ಬ ವ್ಯಕ್ತಿಯ ಪ್ರಾಣ ರಕ್ಷಿಸಿದರೆ ಆತ ಸಂಪೂರ್ಣ ಮನುಕುಲದ ಪ್ರಾಣ ರಕ್ಷಿಸಿದಂತೆ ಎಂದು ಬೋಧಿಸುತ್ತದೆ. ಪವಿತ್ರ ಕುರ್‌ಆನಿನ ಈ ಸೂಕ್ತವನ್ನು ಆಧಾರವಾಗಿಟ್ಟುಕೊಂಡು ಇಸ್ಲಾಮೀ ಕರ್ಮಶಾಸ್ತ್ರ ಮತ್ತು ತರ್ಕಶಾಸ್ತ್ರದ ವಿಶ್ಲೇಷಣೆ ನಡೆಸಿ ಮನುಷ್ಯಕುಲದ ಪ್ರಾಣ ಉಳಿಸಲು ರಕ್ತದಾನ ಮಾಡುವುದರಲ್ಲಿ ತಪ್ಪಿಲ್ಲ ಮತ್ತು ಅದೊಂದು ಪುಣ್ಯದಾಯಕ ಕೆಲಸ ಎಂಬ ತೀರ್ಮಾನಕ್ಕೆ ಬೇಕಲ್ ಉಸ್ತಾದ್ ಬಂದರು.

ಹಾಗೆ ಸುಮಾರು 25 ವರ್ಷಗಳ ಹಿಂದೆ ಅಂದರೆ 1995ರಲ್ಲಿ ಮಂಗಳೂರಿನ ಪುರಭವನದಲ್ಲಿ ಬೇಕಲ್ ಉಸ್ತಾದ್ ಅವರೇ ನೇತೃತ್ವ ವಹಿಸಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಿದರು. ಅಂದಿನ ಪ್ರಸಿದ್ಧ ಉಲಮಾ ನಾಯಕ ತಾಜುಲ್ ಉಲಮಾ ಆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಜುಲ್ ಉಲಮಾರಿಗೆ ಅದಾಗಲೇ ಎಪ್ಪತ್ತು ವರ್ಷ ವಯಸ್ಸು ದಾಟಿದ್ದರಿಂದ ಅವರು ರಕ್ತದಾನ ಮಾಡುವಂತಿರಲಿಲ್ಲ. ಅಂದು ನಲ್ವತ್ತೈದರ ಹರೆಯದವರಾಗಿದ್ದ ಬೇಕಲ್ ಉಸ್ತಾದ್ ಸ್ವಯಂ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಸದ್ಯ ಮುಸ್ಲಿಮ್ ಸಮುದಾಯದ ಎಲ್ಲಾ ಧಾರ್ಮಿಕ ಸಂಘಟನೆಗಳಲ್ಲೂ ರಕ್ತದಾನಿಗಳದ್ದೇ ಒಂದು ಸರ್ವಸನ್ನದ್ಧ ತಂಡವಿರುತ್ತದೆ. ಇಂತಹ ಒಂದು ಸಕಾರಾತ್ಮಕ ಬದಲಾವಣೆಗೆ ಕಾರಣಕರ್ತರು ಇಬ್ಬರು. ಬೇಕಲ್ ಉಸ್ತಾದ್ ಧಾರ್ಮಿಕ ನೆಲೆಯಲ್ಲಿ ಸಮುದಾಯದೊಳಗೆ ಬಹುದೊಡ್ಡ ಜಾಗೃತಿ ಮೂಡಿಸಿದರೆ, ವಕೀಲ ಎಂ.ಬಿ.ಅಬ್ದುಲ್ ರಹ್ಮಾನ್ ಸಾಮಾಜಿಕ ನೆಲೆಯಲ್ಲಿ ಸಮುದಾಯದೊಳಗೆ ಜಾಗೃತಿ ಮೂಡಿಸಿದರು.

ಮುಸ್ಲಿಮ್ ಸಮುದಾಯದೊಳಗೆ ಹಾಸು ಹೊಕ್ಕಾಗಿದ್ದ ಅದೆಷ್ಟೋ ಮೌಢ್ಯಗಳನ್ನು ಹೊಡೆದೋಡಿಸುವಲ್ಲಿ ಬೇಕಲ್ ಉಸ್ತಾದ್ ನಿರ್ಣಾಯಕ ಪಾತ್ರ ವಹಿಸಿದ್ದರು. ಉದಾಹರಣೆಗೆ ಮುಸ್ಲಿಮರಲ್ಲೂ ‘ವಾಸ್ತು’ವಿನ ಗೀಳು ಒಂದು ಕಾಲಕ್ಕೆ ಮಿತಿಮೀರಿತ್ತು. ಬೇಕಲ್ ಉಸ್ತಾದ್ ವಾಸ್ತುವಿನ ವಿರುದ್ಧ ನಿರ್ಭೀತವಾಗಿ ಚಾಟಿ ಬೀಸತೊಡಗಿದರು. ಬೇಕಲ್ ಉಸ್ತಾದರಂತಹ ವಿದ್ವಾಂಸರೇ ಚಾಟಿ ಬೀಸತೊಡಗಿದ್ದನ್ನು ಸಕಾರಾತ್ಮಕವಾಗಿ ಬಳಸತೊಡಗಿದ ಇಸ್ಲಾಮಿಕ್ ಸಾಹಿತಿ ಸಾಲೆತ್ತೂರು ಅಬೂಬಕರ್ ಫೈಝಿ ಅದನ್ನೆತ್ತಿಕೊಂಡು ವಾಸ್ತು, ವಾಸ್ತವವೇನು..? ಎಂಬ ಸರಣಿ ಲೇಖನಗಳನ್ನು ಬರೆದರು. ಅದು ವಾಸ್ತು ಎಂಬ ಮಹಾ ಮೌಢ್ಯವನ್ನು ಸಮಾಜದಿಂದ ಭಾಗಶಃ ಕಿತ್ತೆಸೆಯುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಮೂಲ ಕಾರಣ ಬೇಕಲ್ ಉಸ್ತಾದರ ಭಾಷಣಗಳು.

ವರದಕ್ಷಿಣೆಯ ವಿರುದ್ಧವೂ ಬೇಕಲ್ ಉಸ್ತಾದ್ ನಿರ್ದಾಕ್ಷಿಣ್ಯವಾಗಿ ಮಾತನಾಡುತ್ತಿದ್ದರು. ಜಮೀಯತುಲ್ ಫಲಾಹ್ ‘ಆಕ್ರಂದನ’ ಎಂಬ ಸಾಕ್ಷಚಿತ್ರವೊಂದನ್ನು ಸಿದ್ಧಪಡಿಸಿ ಬಡ ಮುಸ್ಲಿಮ್ ಹೆಣ್ಮಕ್ಕಳು ಮತ್ತು ಹೆಣ್ಣು ಹೆತ್ತವರು ವರದಕ್ಷಿಣೆಯೆಂಬ ಉಪಟಳದಿಂದ ಪ್ರತೀ ನಿತ್ಯ ಕಣ್ಣೀರಲ್ಲಿ ಕೈತೊಳೆಯುವ ಚಿತ್ರಣವನ್ನು ಸಮುದಾಯದ ಮುಂದಿಟ್ಟಿತು. ಬೇಕಲ್ ಉಸ್ತಾದ್ ಅದರ ಪ್ರಮುಖ ಭಾಗವಾಗಿದ್ದರು. ಅಂದಿನಿಂದ ಉಸ್ತಾದ್ ವರದಕ್ಷಿಣೆಯ ವಿರುದ್ಧ ಕಟುವಾಗಿ ಮಾತನಾಡ ತೊಡಗಿದರು. ಅವರ ಭಾಷಣಗಳ ಪ್ರಭಾವ ಯಾವ ಮಟ್ಟಿಗಿತ್ತೆಂದರೆ ಅಸಂಖ್ಯ ಯುವಕರು ವರದಕ್ಷಿಣೆ ರಹಿತ ವಿವಾಹಕ್ಕೆ ಮುಂದೆ ಬಂದರು. ಇಂದು ಕರಾವಳಿಯ ಬ್ಯಾರಿ ಮುಸ್ಲಿಮ್ ಮನೆಗಳಲ್ಲಿ ವರದಕ್ಷಿಣೆ ಪಿಡುಗು ದೊಡ್ಡ ಮಟ್ಟದಲ್ಲಿ ಕಡಿಮೆಯಾಗಿದ್ದರೆ ಅದರ ಹಿಂದಿನ ಪ್ರಮುಖ ಶಕ್ತಿಗಳಲ್ಲಿ ಬೇಕಲ್ ಉಸ್ತಾದ್ ಕೂಡಾ ಒಬ್ಬರು.

ಮದುವೆಗೆ ಮುಂಚಿನ ದಿನ ಮೆಹೆಂದಿ ಎಂಬ ದುಂದುವೆಚ್ಚದ ಮತ್ತು ಅನಗತ್ಯ ಕಾರ್ಯಕ್ರಮವೊಂದು ಮುಸ್ಲಿಮ್ ಸಮುದಾಯದಲ್ಲಿದೆ. ಬೇಕಲ್ ಉಸ್ತಾದ್ ಅದನ್ನು ಕಟುವಾಗಿ ವಿರೋಧಿಸಿದ್ದರು. ಅದೇ ಖರ್ಚಿನಲ್ಲಿ ಒಂದು ಮದುವೆ ಮಾಡಬಹುದು ಎಂದು ಅವರು ಸ್ಪಷ್ಟವಾಗಿ ಹೇಳುತ್ತಿದ್ದರು. ಮೆಹೆಂದಿಯ ದಿನ ತಡರಾತ್ರಿ ಎರಡು ಗಂಟೆಯವರೆಗೂ ಧ್ವನಿವರ್ಧಕ ಇಟ್ಟು ಓರಗೆಯವರಿಗೆ ಕಿರುಕುಳ ಕೊಡುವ ಅಬ್ಬರದ ಸಂಗೀತ ಮತ್ತು ಡ್ಯಾನ್ಸನ್ನು ವಿರೋಧಿಸಿ ಅವರೊಂದೆಡೆ ಭಾಷಣ ಮಾಡಿ ದ್ದರು. ಕನ್ನಡ ಚಾನೆಲ್‌ವೊಂದು ಬೇಕಲ್ ಉಸ್ತಾದ್ ಮೂಲಭೂತವಾದಿ ಹಿನ್ನೆಲೆಯ ಫತ್ವಾ ನೀಡಿದರು ಎಂದು ಗುಲ್ಲೆಬ್ಬಿಸಿತು. ಕೆಲ ಸಂಜೆ ಪತ್ರಿಕೆಗಳು ಅದನ್ನು ದೊಡ್ಡ ಮಟ್ಟದ ವಿವಾದವಾಗಿಸ ಹೊರಟಿದ್ದವು. ಆದರೆ ಬೇಕಲ್ ಉಸ್ತಾದ್ ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಅವರು ಸದಾ ಘನತೆಯಿಂದಲೇ ವರ್ತಿಸು ತ್ತಿದ್ದರು. ಅನಗತ್ಯ ವಿವಾದಗಳಿಂದ ದೂರವಿರುತ್ತಿದ್ದರು. ಓರ್ವ ಖಾಝಿಯಾಗಿ ತಾನು ಹೇಳಬೇಕಾದುದನ್ನು ಯಾವುದೇ ಮುಚ್ಚುಮರೆಯಿಲ್ಲದೇ ಹೇಳುತ್ತಿದ್ದರು.

ಅಲ್-ಅನ್ಸಾರ್ ಕನ್ನಡದ ಪ್ರಮುಖ ಇಸ್ಲಾಮೀ ಪತ್ರಿಕೆ. ಆ ಪತ್ರಿಕೆಯ ಆರಂಭದ ಮೂರು ವರ್ಷಗಳ ಕಾಲ ಸಾಲೆತ್ತೂರು ಫೈಝಿ ಅದರ ಸಂಪಾದಕರಾಗಿದ್ದರು. ಆ ಬಳಿಕ ಬೇಕಲ್ ಉಸ್ತಾದರನ್ನು ಕರೆತಂದು ಪತ್ರಿಕೆಗೆ ಸಂಪಾದಕರನ್ನಾಗಿ ಮಾಡಲಾಗಿತ್ತು. ಅದರಲ್ಲಿ ಪ್ರಕಟವಾಗುತ್ತಿದ್ದ ಯಾವುದೇ ಸೂಕ್ಷ್ಮಾತಿ ಸೂಕ್ಷ್ಮ ವಸ್ತು ವಿಷಯಗಳ ಬಗ್ಗೆ ಈ ವರೆಗೆ ಯಾರಿಗೂ ತಕರಾರೆತ್ತಲು ಸಾಧ್ಯವಾಗಿರದಿದ್ದರೆ ಅದಕ್ಕೆ ಕಾರಣ ಬೇಕಲ್ ಉಸ್ತಾದ್.

ರಾಜ್ಯಾದ್ಯಂತ ಎಲ್ಲಾ ಇಸ್ಲಾಮಿಕ್ ವಿದ್ವಾಂಸರು ಅದರಲ್ಲಿ ಪ್ರಕಟವಾಗುತ್ತಿದ್ದ ‘ಕೇಳಿ-ನೋಡಿ’ ಎಂಬ ಪ್ರಶ್ನೋತ್ತರ ಅಂಕಣವನ್ನು ಅನುಸರಿಸುತ್ತಿದ್ದರು. ಅದರಲ್ಲಿ ಇಸ್ಲಾಮೀ ಕರ್ಮಶಾಸ್ತ್ರ, ತರ್ಕಶಾಸ್ತ್ರ, ಖಗೋಳಶಾಸ್ತ್ರ,ಇಸ್ಲಾಮೀ ಇತಿಹಾಸ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಕಿಂಚಿತ್ ಲೋಪವೂ ಸಂಭವಿಸುವ ಸಾಧ್ಯತೆ ಇರಲಿಲ್ಲ. ಅದಕ್ಕೆ ಕಾರಣ ಆ ಅಂಕಣಕ್ಕೆ ಉತ್ತರ ನೀಡುತ್ತಿದ್ದವರು ಅಥವಾ ಉತ್ತರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದವರು ಬೇಕಲ್ ಉಸ್ತಾದ್.

ಅವರಿಗೆ ‘ತಾಜುಲ್ ಫುಖಹಾಅ್’ ಎಂಬ ಬಿರುದಿತ್ತು. ಅದರ ಅರ್ಥ ಕರ್ಮಶಾಸ್ತ್ರ ಪಂಡಿತರ ಕಿರೀಟ. ಅವರು ಅದಕ್ಕೆ ಅನ್ವರ್ಥ ನಾಮದಂತೆಯೇ ಇದ್ದರು. ಕರ್ನಾಟಕ ಮತ್ತು ಕೇರಳದ ಅತಿರಥ ಮಹಾರಥ ವಿದ್ವಾಂಸರು ಮತ್ತು ಖಾಝಿಗಳೂ ಸಂಶಯ ನಿವಾರಣೆಗಾಗಿ ಬೇಕಲ್ ಉಸ್ತಾದರನ್ನೇ ಆಶ್ರಯಿಸುತ್ತಿದ್ದರು. ಆದರೆ ಅವರೆಂದೂ ಇಂತಹವರು ನನ್ನ ಬಳಿ ಸಂಶಯ ನಿವಾರಣೆಗೆಂದು ಬರುತ್ತಿರುತ್ತಾರೆ ಎಂದು ಹೇಳಿದ್ದಿಲ್ಲ.

ಕರಾವಳಿಯ ಇಸ್ಲಾಮಿಕ್ ವಿದ್ವತ್ ಜಗತ್ತಿನಲ್ಲಿ ಕೇರಳದ ವಿದ್ವಾಂಸರಿಗೆ ಮಹತ್ವದ ಸ್ಥಾನವಿದೆ. ಕರಾವಳಿ ಕರ್ನಾಟಕಕ್ಕೆ ಇಸ್ಲಾಮ್ ಬಂದಿದ್ದು ಕೇರಳದಿಂದ ಮತ್ತು ಇಲ್ಲಿನ ಜನ ಧಾರ್ಮಿಕ ವಿಚಾರಗಳಿಗಾಗಿ ಅತೀ ಹೆಚ್ಚು ಅವಲಂಬಿಸುತ್ತಿದ್ದುದು ಕೇರಳವನ್ನೇ ಆಗಿತ್ತು. ಆದರೆ ಬೇಕಲ್ ಉಸ್ತಾದರ ಪಾಂಡಿತ್ಯವನ್ನು ನಿರಾಕರಿಸಲು ಯಾರಿಂದಲೂ ಸಾಧ್ಯವಿರಲಿಲ್ಲ. ಅವರು ಅಂತಹ ಪಾಂಡಿತ್ಯದ ಗಣಿಯಾಗಿದ್ದರು.ಅವರು ವಿವಿಧ ಸಂಘಟನೆಗಳ ನಡುವಿನ ಸಮನ್ವಯಕಾರರೂ ಆಗಿದ್ದರು.

ಕನ್ನಡದಲ್ಲಿ ಚೆನ್ನಾಗಿ ಭಾಷಣ ಮಾಡುತ್ತಿದ್ದ ಅವರು ಮುಸ್ಲಿಮ್ ಸಮುದಾಯಕ್ಕೆ ಯಾವುದೇ ಸಮಸ್ಯೆ ಎದುರಾದಾಗಲೂ ಸಮುದಾಯದ ಪರ ಅಭೇದ್ಯ ಧ್ವನಿಯಾಗಿದ್ದರು. ಇತ್ತೀಚಿನ ಎನ್.ಆರ್.ಸಿ. ವಿರುದ್ಧದ ಹೋರಾಟದಲ್ಲಿ ಕರಾವಳಿ ಕರ್ನಾಟಕದ ಚಳವಳಿಯ ನೇತೃತ್ವವನ್ನು ಅವರೇ ವಹಿಸಿದ್ದರು. ವಕೀಲ ನೌಶಾದ್ ಕಾಶಿಂಜಿ ಹತ್ಯೆಯಾದಾಗ ಅದರ ವಿರುದ್ಧ ನ್ಯಾಯಪರ ಹೋರಾಟಕ್ಕೆ ತನ್ನ ಪ್ರತಿನಿಧಿಗಳನ್ನು ಕಳುಹಿಸುತ್ತಿದ್ದರು. ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹಮ್ಮಿ ಕೊಂಡಿದ್ದ ಗೋ ಹತ್ಯಾ ವಿರೋಧಿ ಚಳವಳಿಗೆ ಅವರು ತನ್ನ ಪ್ರತಿನಿಧಿಗಳನ್ನು ಕಳುಹಿಸುತ್ತಿದ್ದರು. ಮಾತ್ರವಲ್ಲ ಇಂತಹ ನ್ಯಾಯಪರ ಹೋರಾಟ ಗಳಲ್ಲಿ ಭಾಗಿಯಾಗುವುದು ಅತೀ ಅಗತ್ಯ ಎಂದು ಅವರು ಉಪದೇಶಿಸುತ್ತಿದ್ದರು ಕೂಡಾ. ಮದ್ರಸಗಳ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸಿದಾಗ ಅದರ ವಿರುದ್ಧದ ಚಳವಳಿಯಲ್ಲಿಯೂ ಅವರು ಸಕ್ರಿಯರಾಗಿದ್ದರು.

ಅವರು ಎಲ್ಲಾ ಧರ್ಮೀಯರನ್ನು ಸಮಾನ ಗೌರವದಿಂದ ಕಾಣುತ್ತಿದ್ದರು, ಮತ್ತು ಎಲ್ಲಾ ಸಮುದಾಯಗಳೊಂದಿಗೂ ಅತ್ಯುತ್ತಮ ಬಾಂಧವ್ಯವನ್ನೂ ಹೊಂದಿದ್ದರು. ಅವರು ಎನ್.ಆರ್.ಸಿ. ವಿರುದ್ಧದ ಹೋರಾಟದಲ್ಲಿ ಭಾರತ ಯಾವುದೇ ಪಕ್ಷದ, ಧರ್ಮದ ಸ್ವತ್ತಲ್ಲ.. ಭಾರತ ಸಮಸ್ತ ಭಾರತೀಯರದ್ದು... ಭಾರತವನ್ನು ಎಲ್ಲಾ ಭಾರತೀಯರ ಭಾರತವಾಗಿಯೇ ಉಳಿಸಲು ನಾವು ಕಟಿಬದ್ಧರುಎಂದು ಘೋಷಿಸಿದ್ದ ಭಾರತೀಯತೆಯ ಧ್ವನಿ ಈಗಲೂ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ.

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News