ಮೂರು ದಿನ ರೈಲು ತಡೆ: ಪಂಜಾಬ್‌ನಲ್ಲಿ ಸಂಚಾರ ಅಸ್ತವ್ಯಸ್ತ

Update: 2020-09-25 03:48 GMT

ಚಂಡೀಗಢ, ಸೆ.25: ಸಂಸತ್ತು ಇತ್ತೀಚೆಗೆ ಅನುಮೋದಿಸಿದ ಕೃಷಿ ಮಸೂದೆಗಳನ್ನು ವಿರೋಧಿಸಿ, ಪಂಜಾಬ್ ರೈತರು ಗುರುವಾರ ಮೂರು ದಿನಗಳ ರೈಲು ತಡೆ ಚಳವಳಿಯನ್ನು ಆರಂಭಿಸಿದ್ದು, ರಾಜ್ಯದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಪ್ರತಿಭಟನಾಕಾರರ ಜತೆಗೆ ಸಂಘರ್ಷ ತಪ್ಪಿಸುವ ಕ್ರಮವಾಗಿ ರೈಲ್ವೆ ಇಲಾಖೆ ಹಲವು ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಿದೆ.

ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಹೋರಾಟಕ್ಕೆ ಕರೆ ನೀಡಿದ್ದು, ಹಲವು ರೈತ ಸಂಘಟನೆಗಳು ಇದನ್ನು ಬೆಂಬಲಿಸಿವೆ. ರೈಲು ತಡೆ ಚಳವಳಿಯ ಹೊರತಾಗಿ ಶುಕ್ರವಾರ ಪಂಜಾಬ್ ಬಂದ್ ಆಚರಿಸುವಂತೆ 31 ರೈತ ಸಂಘಟನೆಗಳು ಕರೆ ನೀಡಿವೆ. ಶುಕ್ರವಾರ ಎರಡು ಗಂಟೆ ಕಾಲ ವಾಹನ ಸಂಚಾರವನ್ನು ಕೂಡಾ ಸ್ಥಗಿತಗೊಳಿಸುವಂತೆ ಶಿರೋಮಣಿ ಅಕಾಲಿದಳ ಕರೆ ನೀಡಿದೆ. ಅಕ್ಟೋಬರ್ 1ರಿಂದ ಅನಿರ್ದಿಷ್ಟಾವಧಿವರೆಗೆ ರೈಲು ಸಂಚಾರಕ್ಕೆ ಅಡ್ಡಿಪಡಿಸುವುವದಾಗಿ ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಭಟಿಂಡಾದ 19 ಕಡೆಗಳಲ್ಲಿ ಬಿಕೆಯು ಏಕತಾ ಉಗ್ರಹಾನ್ ಪ್ರತಿಭಟನೆ ನಡೆಸಿದೆ. ರೈಲು ಹಳಿಗಳ ಮೇಲೆ ಡೇರೆ ಹಾಕಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಫಿರೋಝ್ ‌ಪುರ ರೈಲ್ವೆ ವಿಭಾಗ ಮೂರು ದಿನಗಳ ಅವಧಿಗೆ 14 ರೈಲುಗಳ ಸಂಚಾರ ರದ್ದುಪಡಿಸಿದೆ.

"ಇದು ಮಾಡು ಇಲ್ಲವೇ ಮಡಿ ಹೋರಾಟ; ಈ ಮಸೂದೆ ಕಾಯ್ದೆಯಾದರೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಇತಿಹಾಸದ ಪುಟ ಸೇರಲಿದೆ. ಬೆಳೆಗಳನ್ನು ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ಅವರಿಗೆ ಇಷ್ಟ ಬಂದ ಬೆಲೆಯಲ್ಲಿ ಖರೀದಿಸಲಿದ್ದಾರೆ. ಎಪಿಎಂಸಿಗಳಿಗೆ ದೊಡ್ಡ ಪ್ರಮಾಣದ ನಷ್ಟವಾಗಲಿದೆ. ಗುತ್ತಿಗೆ ಕೃಷಿ ಸಣ್ಣ ಹಾಗೂ ಅತಿಸಣ್ಣ ರೈತರನ್ನು ತಮ್ಮದೇ ಹೊಲಗಳ ಕೃಷಿ ಕಾರ್ಮಿಕರನ್ನಾಗಿ ಪರಿವರ್ತಿಸಲಿದೆ" ಎಂದು ಬಿಕೆಯು ಉಗ್ರಹಾನ್ ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಕೋಕ್ರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News