ಅಧಿಕ ಪರಿಣಾಮಕಾರಿ ಕೊರೋನ ವೈರಸ್ ಪ್ರತಿಕಾಯ ಸಂಶೋಧನೆ

Update: 2020-09-25 16:17 GMT

ಬರ್ಲಿನ್, ಸೆ.25: ಕೊರೋನ ಸೋಂಕಿನಿಂದ ಚೇತರಿಸಿಕೊಂಡವರ ರಕ್ತದಿಂದ ಸುಮಾರು 600 ವಿಧದ ಪ್ರತಿಕಾಯಗಳನ್ನು ಪ್ರತ್ಯೇಕಿಸಿ ಇದರಲ್ಲಿ ಹೆಚ್ಚು ಪರಿಣಾಮಕಾರಿ ಪ್ರತಿಕಾಯಗಳನ್ನು ಪತ್ತೆಹಚ್ಚಲಾಗಿದೆ. ಇದನ್ನು ಬಳಸಿ ಪ್ಯಾಸಿವ್(ನಿಷ್ಕ್ರಿಯ) ಲಸಿಕೆ ಅಭಿವೃದ್ಧಿ ಪಡಿಸಬಹುದಾಗಿದೆ ಎಂದು ಸಂಶೋಧನಾ ವರದಿ ಹೇಳಿದೆ. ಪ್ಯಾಸಿವ್ ಲಸಿಕೆ ಎಂದರೆ, ರೋಗದ ವಿರುದ್ಧದ ಪ್ರತಿಕಾಯಗಳನ್ನು ವ್ಯಕ್ತಿಯ ದೇಹದಲ್ಲಿ ಉತ್ಪತ್ತಿ ಮಾಡುವ ಬದಲು ಮತ್ತೊಬ್ಬ ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾದ ಪ್ರತಿಕಾಯಗಳನ್ನು ಆತನ ದೇಹಕ್ಕೆ ಸೇರಿಸುವುದಾಗಿದೆ. ಸಕ್ರಿಯ ಲಸಿಕೆಗಿಂತ ಭಿನ್ನವಾಗಿ, ನಿಷ್ಕ್ರಿಯ ಲಸಿಕೆಯು ಸಿದ್ಧ ಪ್ರತಿಕಾಯಗಳನ್ನು ಹೊಂದಿದ್ದು, ಕೆಲ ಸಮಯದ ಬಳಿಕ ಇದರ ಪ್ರಭಾವ ನಶಿಸುತ್ತದೆ. 

ಜರ್ಮನ್ ಸೆಂಟರ್ ಫಾರ್ ನ್ಯೂರೊಡಿಜನರೇಟಿವ್ ಡಿಸೀಸಸ್(ಡಿಝೆಡ್‌ಎನ್‌ಇ) ಮತ್ತು ಚಾರಿಟಿ ಯುನಿವರ್ಸಿಟಾಸ್‌ಮೆಡಿಸಿನ್ ಬರ್ಲಿನ್‌ನ ಸಂಶೋಧಕರು ಈ ಸಂಶೋಧನೆ ಮಾಡಿರುವುದಾಗಿ ‘ದಿ ಜರ್ನಲ್ ಸೆಲ್’ನಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ. ಕೆಲವು ‘ಸಾರ್ಸ್ ಸಿಒವಿ-2’ ಪ್ರತಿಕಾಯಗಳು ವಿವಿಧ ಅಂಗಗಳಿಂದ ಅಂಗಾಂಶದ ಮಾದರಿಗಳೊಂದಿಗೆ ಸಂಘಟಿತಗೊಂಡಿದ್ದು ಇದು ಅನಪೇಕ್ಷಿತ ಅಡ್ಡಪರಿಣಾಮಗಳಿಗೆ ಪ್ರಚೋದನೆ ನೀಡಬಹುದು. ಕೊರೋನ ಸೋಂಕಿನಿಂದ ಚೇತರಿಸಿಕೊಂಡವರ ರಕ್ತದಿಂದ ಸುಮಾರು 600 ವಿಧದ ಪ್ರತಿಕಾಯಗಳನ್ನು ಪ್ರತ್ಯೇಕಿಸಿ ಇದರಲ್ಲಿ ಹೆಚ್ಚು ಪರಿಣಾಮಕಾರಿ ಪ್ರತಿಕಾಯಗಳನ್ನು ಪತ್ತೆಹಚ್ಚಲಾಗಿದೆ. ಪ್ರಯೋಗಾಲಯದ ಪರೀಕ್ಷೆಗಳ ಬಳಿಕ 600 ಪ್ರತಿಕಾಯಗಳಿಂದ ಪರಿಣಾಮಕಾರಿಯಾದ ಕೆಲವನ್ನು ಮಾತ್ರ ಪ್ರತ್ಯೇಕಿಸಲಾಗಿದ್ದು ಬಳಿಕ ಕೃತಕ ಜೀವಕೋಶ ಪರಿಸರದಲ್ಲಿ ಪ್ರತಿಕಾಯಗಳನ್ನು ಕೃತಕವಾಗಿ ಉತ್ಪಾದಿಸಲಾಗಿದೆ . ತಟಸ್ಥಗೊಳಿಸುವ ಪ್ರತಿಕಾಯಗಳು ವೈರಸ್ ಅನ್ನು ನಿರ್ಬಂಧಿಸುವುದು ಸೂಕ್ಷ್ಮ ಪರಿಶೀಲನೆಯಿಂದ ತಿಳಿದುಬಂದಿದೆ. ಈ ಮೂಲಕ ವೈರಸ್ ಜೀವಕೋಶವನ್ನು ಪ್ರವೇಶಿಸಿ ಪುನರುತ್ಪಾದನೆ ಮಾಡದಂತೆ ತಡೆಯುತ್ತದೆ. ಜೊತೆಗೆ, ಜೀವಕೋಶದಲ್ಲಿ ವೈರಸ್ ನಾಶಗೊಳಿಸುವ ಪ್ರತಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ ಎಂದು ವರದಿ ತಿಳಿಸಿದೆ. ಸೋಂಕು ತಗಲಿದ ಬಳಿಕ ಪ್ರತಿಕಾಯಗಳನ್ನು ನೀಡಿದಾಗ ಪ್ರಾಣಿಗಳಲ್ಲಿ ಹೆಚ್ಚೆಂದರೆ ಸೌಮ್ಯ ರೋಗದ ಲಕ್ಷಣ ಕಂಡು ಬರುತ್ತದೆ. ಆದರೆ ಸೋಂಕು ತಗಲುವ ಮೊದಲೇ ನೀಡಿದರೆ ಪ್ರಾಣಿಗಳಿಗೆ ರೋಗ ಬಾಧಿಸುವುದಿಲ್ಲ ಎಂದು ಸಂಶೋಧನಾ ಕಾರ್ಯದ ಸಂಯೋಜಕ ಜಾಕೋಬ್ ಕ್ರೇಯ್ ಹೇಳಿದ್ದಾರೆ.

ಕೊರೋನ ಸೋಂಕಿನಿಂದ ಚೇತರಿಸಿಕೊಂಡವರ ದೇಹದಿಂದ ಪ್ರತ್ಯೇಕಿಸಿದ ಪ್ಲಾಸ್ಮವನ್ನು ಬಳಸಿಯೂ ಈ ವಿಧಾನವನ್ನು ಅನುಸರಿಸಬಹುದು. ಅತ್ಯಂತ ಪರಿಣಾಮಕಾರಿ ಪ್ರತಿಕಾಯಗಳನ್ನು ಕೈಗಾರಿಕೆಯ ಮಾದರಿಯಲ್ಲಿ ಮತ್ತು ಸ್ಥಿರ ಗುಣಮಟ್ಟದಲ್ಲಿ ಉತ್ಪಾದಿಸುವುದು ನಮ್ಮ ಉದ್ದೇಶವಾಗಿದೆ ಎಂದು ಸಂಶೋಧನಾ ಪ್ರಬಂಧದ ಪ್ರಥಮ ಬರಹಗಾರ ಮೋಮ್ಸೆನ್ ರೀಂಕೆ ಹೇಳಿದ್ದಾರೆ. ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ಆರೋಗ್ಯವಂತ ವ್ಯಕ್ತಿಗೆ ನಿರೋಧಕ ರಕ್ಷಣೆಯಾಗಿಯೂ ಈ ಪ್ರತಿಕಾಯಗಳನ್ನು ಬಳಸುವ ಬಗ್ಗೆ ವೈದ್ಯಕೀಯ ಪರೀಕ್ಷೆಯ ಬಳಿಕ ನಿರ್ಧರಿಸಲಾಗುವುದು ಎಂದು ಸಂಶೋಧನಾ ತಂಡದ ನಾಯಕ ಹೆರಾಲ್ಡ್ ಪ್ರೂಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News