ಭಾರತದಲ್ಲಿ ಜುರಾಸಿಕ್ ಯುಗದ ಪಳೆಯುಳಿಕೆಗಳು ಪತ್ತೆ

Update: 2020-09-28 14:24 GMT

ರಾಂಚಿ,ಸೆ.28: ಜಾರ್ಖಂಡ್‌ನ ಸಾಹಿಬ್‌ಗಂಜ್ ಜಿಲ್ಲೆಯ ತಾಲಜಾರಿ ಪ್ರದೇಶದಲ್ಲಿರುವ ದೂಧಕೋಲ್ ಪರ್ವತದಲ್ಲಿ ಸುಮಾರು 150-200 ಮಿಲಿಯನ್ ವರ್ಷಗಳ ಹಿಂದಿನದೆಂದು ಅಂದಾಜಿಸಲಾಗಿರುವ ಜುರಾಸಿಕ್ ಯುಗದ ಎಲೆಗಳ ಪಳೆಯುಳಿಕೆಗಳನ್ನು ಭೂಗರ್ಭಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ.

“20 ಸೆಂ.ಮೀx 5 ಸೆಂ.ಮೀ.ಗಾತ್ರದ, ಪಳೆಯುಳಿಕೆಗಳ ರೂಪಕ್ಕೆ ತಿರುಗಿರುವ ಟಿಲೊಫೈಲಮ್ ಗುಂಪಿಗೆ ಸೇರಿದ ಎಲೆಗಳನ್ನು ಪತ್ತೆ ಹಚ್ಚಲಾಗಿದ್ದು,ಇನ್ನಷ್ಟು ಉತ್ಖನನ ನಡೆಯುತ್ತಿದೆ. ಸಸ್ಯಾಹಾರಿ ಡೈನೊಸಾರ್‌ಗಳು ಇಂತಹ ಎಲೆಗಳನ್ನು ಭಕ್ಷಿಸುತ್ತಿದ್ದವು. ಈ ಪ್ರದೇಶದಲ್ಲಿ ಅಪ್ಪರ್ ಜುರಾಸಿಕ್‌ನಿಂದ ಕ್ರೆಟಾಸಿಯಸ್ ಯುಗದವರೆಗಿನ ಸಣ್ಣ ಪಳೆಯುಳಿಕೆಗಳು ಈ ಹಿಂದೆ ಪತ್ತೆಯಾಗಿದ್ದವು. ಮುಂದಿನ ಉತ್ಖನನದಲ್ಲಿ ಡೈನೊಸಾರ್‌ನ ಮೊಟ್ಟೆಗಳ ಪಳೆಯುಳಿಕೆಗಳೂ ಪತ್ತೆಯಾಗಬಹುದು. ನಮ್ಮ ತಂಡ ಕಳೆದ 12 ವರ್ಷಗಳಿಂದಲೂ ಈ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಆದರೆ ಇಷ್ಟೊಂದು ದೊಡ್ಡ ಗಾತ್ರದ ಪಳೆಯುಳಿಕೆಗಳು ಇದೇ ಮೊದಲ ಬಾರಿಗೆ ಪತ್ತೆಯಾಗಿವೆ” ಎಂದು ಸಾಹಿಬ್‌ಗಂಜ್ ಪಿ.ಜಿ.ಕಾಲೇಜಿನ ಭೂಗರ್ಭಶಾಸ್ತ್ರಜ್ಞ ರಂಜಿತ್ ಕುಮಾರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಯೋಜನೆಯಡಿ ಲಕ್ನೋದ ನ್ಯಾಷನಲ್ ಬಟಾನಿಕಲ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ನ ಸಹಯೋಗದಲ್ಲಿ ಈ ಉತ್ಖನನ ಕಾರ್ಯ ನಡೆಯುತ್ತಿದೆ.

 ಈ ಹಿಂದೆ ಸಾಹಿಬ್‌ಗಂಜ್‌ನ ಮಹಾರಾಜಪುರ, ತರ್‌ಪಹಾಡ್, ಗರ್ಮಿಪಹಾಡ್ ಮತ್ತು ಬರಾರ್ವಾ ಪ್ರದೇಶಗಳಲ್ಲಿ ಹಾಗೂ ನೆರೆಯ ಪಾಕುರ್ ಜಿಲ್ಲೆಯ ಸೋನಝಾರಿಯಲ್ಲಿ ಹಲವಾರು ಪಳೆಯುಳಿಕೆಗಳು ಪತ್ತೆಯಾಗಿದ್ದವು ಎಂದು ಸಿಂಗ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News