ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಬಿಜೆಪಿ ನಾಯಕ ಮತ್ತು ಮಾಜಿ ಡಿಐಜಿ ವಿರುದ್ಧ ಲುಕ್ ಔಟ್ ನೋಟಿಸ್

Update: 2020-09-29 11:10 GMT
ದಿಬೇನ್ ದೇಕಾ (Facebook)

ಗುವಹಾತಿ: ಪೊಲೀಸ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆ ನಡೆಸುತ್ತಿರುವ ಅಸ್ಸಾಂ ಪೊಲೀಸರು ಬಿಜೆಪಿಯ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ತಾನೆಂದು ಹೇಳಿಕೊಳ್ಳುವ ದಿಬೇನ್ ದೇಕಾ ಹಾಗೂ ಮಾಜಿ ಡಿಐಜಿ ಪಿ ಕೆ ದತ್ತಾ ಅವರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ. ಇಬ್ಬರ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ನಗದು ಬಹುಮಾನವನ್ನು ಅಸ್ಸಾಂ ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತ ಘೋಷಿಸಿದ್ದಾರೆ.

ಸೆಪ್ಟೆಂಬರ್ 20ರಂದು ನಡೆಯಬೇಕಿದ್ದ ಪೊಲೀಸ್ ನೇಮಕಾತಿ ಪರೀಕ್ಷೆ  ಇನ್ನೇನು ಆರಂಭಗೊಳ್ಳಬೇಕೆನ್ನುವಷ್ಟರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ತಿಳಿಯುತ್ತಲೇ ಪರೀಕ್ಷೆಯನ್ನು  ರದ್ದುಗೊಳಿಸಲಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ಇಲ್ಲಿಯ ತನಕ 19 ಮಂದಿಯನ್ನು ಬಂಧಿಸಿದ್ದಾರೆ.

ಪೊಲೀಸರು ಈಗಾಗಲೇ ಭರ್ಗಬ್ ಗ್ರ್ಯಾಂಡ್ ಹೋಟೆಲ್‍ಗೆ ದಾಳಿ ನಡೆಸಿದ್ದು ಅಭ್ಯರ್ಥಿಗಳ ರಸೀದಿ ಹಾಗೂ 445 ಖಾಲಿ ಪ್ರವೇಶಪತ್ರಗಳು ಹಾಗೂ ರೂ.  5.45 ಲಕ್ಷ ಅಕ್ರಮ ಹಣವೂ ಪತ್ತೆಯಾಗಿತ್ತು. ಈ ಹೊಟೇಲ್‍ಗೆ ಸೆಪ್ಟೆಂಬರ್ 19ರಂದು ಆಗಮಿಸಿದ್ದ ಹಲವು ಅಭ್ಯರ್ಥಿಗಳು ಸೆಪ್ಟೆಂಬರ್ 20ರಂದು ಬೆಳಿಗ್ಗೆ 7 ಗಂಟೆಗೆ ಅಲ್ಲಿಂದ ಹೊರ ಹೋಗಿದ್ದರು. ಅಲ್ಲಿ 4 ಸುತ್ತು ಗುಂಡುಗಳು ಹಾಗೂ ಒಂದು ಪಿಸ್ತೂಲ್ ಕೂಡ ಪತ್ತೆಯಾಗಿತ್ತು.

ಸದ್ಯ ಪರೀಕ್ಷೆಯ ದಿನಾಂಕವನ್ನು ಅಕ್ಟೋಬರ್ 25 ಎಂದು ಮರುನಿಗದಿ ಪಡಿಸಲಾಗಿದ್ದು  ಹಿರಿಯ ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಪರೀಕ್ಷೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News