ಕುವೈತ್ ನ ಅಮೀರ್ ಶೇಖ್ ಸಬಾಹ್ ನಿಧನ

Update: 2020-09-29 17:43 GMT

 ‘‘ಕುವೈತ್ ದೇಶದ ಅಮೀರ್ ಶೇಖ್ ಸಾಬಾ ಅಲ್-ಅಹ್ಮದ್ ಅಲ್ ಜಾಬಿರ್ ಅಲ್-ಸಬಾಹ್ ನಿಧನಕ್ಕೆ ನಾವು ಶೋಕ ವ್ಯಕ್ತಪಡಿಸುತ್ತೇವೆ’’ ಎಂದು ರಾಜ ಕುಟುಂಬದ ವ್ಯವಹಾರಗಳ ಸಚಿವ ಶೇಖ್ ಅಲಿ ಜರಾ ಅಲ್- ಸಬಾಹ್ ಟೆಲಿವಿಶನ್‌ನಲ್ಲಿ ಘೋಷಿಸಿದ್ದಾರೆ.

2019ರ ಆಗಸ್ಟ್‌ನಲ್ಲಿ ಶೇಖ್ ಸಬಾಹ್ ತೀವ್ರ ಅಸ್ವಸ್ಥರಾಗಿದ್ದರು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

2020 ಜುಲೈಯಲ್ಲಿ ಅವರು ಹೆಚ್ಚಿನ ಚಿಕಿತ್ಸೆಗಾಗಿ ಅವೆುರಿಕಕ್ಕೆ ಪ್ರಯಾಣಿಸಿದರು. ಅಮೆರಿಕದ ವಾಯುಪಡೆಯ ಸಿ-17 ವಿಮಾನವೊಂದರ (ಅದನ್ನು ಹಾರುವ ಆಸ್ಪತ್ರೆಯೆಂಬುದಾಗಿ ಕರೆಯಲಾಗುತ್ತದೆ) ಮೂಲಕ ಅವರನ್ನು ಕುವೈತ್‌ನಿಂದ ಅಮೆರಿಕದ ಮಿನಸೋಟ ರಾಜ್ಯದ ರೋಚೆಸ್ಟರ್ ನಗರಕ್ಕೆ ಕರೆದೊಯ್ಯಲಾಗಿತ್ತು.

ಅವರ ಅನುಪಸ್ಥಿತಿಯಲ್ಲಿ ಅವರ ಮಲಸಹೋದರ, 83 ವರ್ಷದ ಯುವರಾಜ ನವಾಫ್ ಅಲ್-ಅಹ್ಮದ್ ಅಲ್- ಸಬಾಹ್ ರನ್ನು ಕುವೈತ್‌ನ ಉಸ್ತುವಾರಿ ಆಡಳಿತಗಾರನಾಗಿ ನೇಮಿಸಲಾಗಿತ್ತು.

ಕತರ್ ಮೇಲಿನ ನಿಷೇಧ ತೆರವಿಗೆ ಪ್ರಯತ್ನಿಸಿದ್ದರು

ಶೇಖ್ ಸಬಾಹ್ ರಾಜತಾಂತ್ರಿಕತೆಯ ಮೂಲಕ ಪ್ರಾದೇಶಿಕ ವಿವಾದಗಳನ್ನು ಬಗೆಹರಿಸಲು ಪ್ರಯತ್ನಿಸಿದ್ದರು.

ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ದೇಶಗಳು ಕತರ್ ದೇಶದ ವಿರುದ್ಧ ರಾಜತಾಂತ್ರಿಕ ಮತ್ತು ಆರ್ಥಿಕ ಬಹಿಷ್ಕಾರ ವಿಧಿಸಿದ ಬಳಿಕ, ವಿವಾದವನ್ನು ಇತ್ಯರ್ಥಗೊಳಿಸಲು ಶ್ರಮಿಸಿದ್ದರು. ಈ ನಿಟ್ಟಿನಲ್ಲಿ ಅವರು ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದ್ದರು. ಆದರೆ, ಅದು ಯಶಸ್ವಿಯಾಗಲಿಲ್ಲ.

ಇರಾಕ್ ಮತ್ತು ಸಿರಿಯ ಮುಂತಾದ ಯುದ್ಧಪೀಡಿತ ದೇಶಗಳಿಗಾಗಿ ಹಲವಾರು ದೇಣಿಗೆದಾರ ಸಮಾವೇಶಗಳನ್ನು ಅವರು ಏರ್ಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News