ಆರ್ಮೇನಿಯ-ಅಝರ್‌ಬೈಜಾನ್ ನಡುವಿನ ಯುದ್ಧ 3ನೇ ದಿನಕ್ಕೆ: 100 ಸಾವು

Update: 2020-09-29 16:30 GMT

ಬಾಕು (ಅಝರ್‌ಬೈಜಾನ್), ಸೆ. 29: ಆರ್ಮೇನಿಯ ಮತ್ತು ಅಝರ್‌ಬೈಜಾನ್ ದೇಶಗಳ ಸೈನಿಕರ ನಡುವೆ ನಡೆಯುತ್ತಿರುವ ಯುದ್ಧ ಮಂಗಳವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ನಾಗರಿಕರು ಸೇರಿದಂತೆ ಸುಮಾರು 100 ಮಂದಿ ಮೃತಪಟ್ಟಿದ್ದಾರೆ.

ವಿವಾದಿತ ನಗೋರ್ನೊ-ಕರಬಾಖ್ ವಲಯವನ್ನು ಪಡೆಯುವುದಕ್ಕಾಗಿ ಎರಡು ದೇಶಗಳು ಯುದ್ಧದಲ್ಲಿ ತೊಡಗಿವೆ.

ಆರ್ಮೇನಿಯನ್ ಪ್ರತ್ಯೇಕತಾವಾದಿಗಳು 1990ರ ದಶಕದಲ್ಲಿ ಸಶಸ್ತ್ರ ಸಂಘರ್ಷದ ಮೂಲಕ ನಗೋರ್ನೊ-ಕರಬಾಖ್ ವಲಯವನ್ನು ಅಝರ್‌ಬೈಜಾನ್‌ನಿಂದ ವಶಪಡಿಸಿಕೊಂಡಿದ್ದರು. ಈಗ ಅದರ ನಿಯಂತ್ರಣ ಆರ್ಮೇನಿಯನ್ ಜನಾಂಗೀಯರ ವಶದಲ್ಲಿದೆ.

ರವಿವಾರದಿಂದ ತನ್ನ 84 ಸೈನಿಕರು ಮೃತಪಟ್ಟಿದ್ದಾರೆ ಎಂದು ಸ್ವಘೋಷಿತ ರಿಪಬ್ಲಿಕ್ ನಗೋರ್ನೊ-ಕರಬಾಖ್ ಹೇಳಿದೆ. ನಾಗರಿಕರೂ ಸಾವಿಗೀಡಾಗಿದ್ದಾರೆ ಎಂದು ಅದು ತಿಳಿಸಿದೆ.

ಅಝರ್‌ಬೈಜಾನ್ ತನ್ನ ಸೈನಿಕರ ಸಾವಿನ ಸಂಖ್ಯೆಯನ್ನು ತಿಳಿಸಿಲ್ಲ. ಆದರೆ, ಏಳು ನಾಗರಿಕರು ಮೃತಪಟ್ಟಿರುವುದನ್ನು ಅದು ಖಚಿತಪಡಿಸಿದೆ.

 ಈ ಹಿಂದಿನ ಸೋವಿಯತ್ ಒಕ್ಕೂಟದ ಸದಸ್ಯರ ನಡುವೆ ರವಿವಾರ ಸ್ಫೋಟಗೊಂಡ ಯುದ್ಧವು ಈಗ ನಗೋರ್ನೊ-ಕರಬಾಖ್‌ನಿಂದ ಹೊರಗೆ ಪಸರಿಸಿದೆ. ಮಂಗಳವಾರ ಪೂರ್ವ ಆರ್ಮೇನಿಯದ ನಗರ ವರ್ದೆನಿಸ್‌ನಲ್ಲಿ ಅಝರ್‌ ಬೈಜಾನ್ ಹಾರಿಸಿದ ಡ್ರೋನ್ ಪ್ರಯಾಣಿಕ ಬಸ್ಸೊಂದಕ್ಕೆ ಬಡಿದಿದೆ ಎಂದು ಆರ್ಮೇನಿಯದ ರಕ್ಷಣಾ ಸಚಿವಾಲಯ ತಿಳಿಸಿದೆ. ಸಾವು-ನೋವಿನ ಬಗ್ಗೆ ಯಾವುದೇ ವರದಿ ಬಂದಿಲ್ಲ.

ಸೋಮವಾರ ಆರ್ಮೇನಿಯ ನಡೆಸಿದ ಶೆಲ್ ದಾಳಿಯಲ್ಲಿ ಇಬ್ಬರು ತನ್ನ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಝರ್‌ಬೈಜಾನ್ ಈ ಮೊದಲು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News