ನೀವು ಬಾಯಿ ಮುಚ್ಚಿ: ನೇರ ಮುಖಾಮುಖಿಯಲ್ಲಿ ಟ್ರಂಪ್ ವಿರುದ್ಧ ಜೋ ಬೈಡನ್ ವಾಗ್ದಾಳಿ

Update: 2020-09-30 05:20 GMT

ವಾಷಿಂಗ್ಟನ್ : ಅಮೆರಿಕದಲ್ಲಿ 70 ಲಕ್ಷಕ್ಕೂ ಅಧಿಕ ಮಂದಿ ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದು, ಇದಕ್ಕೆ ಟ್ರಂಪ್ ಆಡಳಿತದ ತಪ್ಪು ನೀತಿಗಳೇ ಕಾರಣ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡನ್ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕ ಕಂಡ ಅತ್ಯಂತ ಕೆಟ್ಟ ಅಧ್ಯಕ್ಷ ಟ್ರಂಪ್ ಎಂದು ಬೈಡನ್ ಪ್ರತಿಪಾದಿಸಿದರು.

ಕ್ಲೀವ್‌ಲ್ಯಾಂಡ್ ಓಹಿಯೊದಲ್ಲಿ ನಡೆದ ಬಹುನಿರೀಕ್ಷಿತ ನೇರ ಮುಖಾಮುಖಿಯಲ್ಲಿ ಬೈಡನ್, ಟ್ರಂಪ್ ಆಡಳಿತದ ವೈಫಲ್ಯಗಳನ್ನು ಕಟುವಾಗಿ ಟೀಕಿಸಿದರು. ಆದರೆ ನೀವು ಅಧಿಕಾರದಲ್ಲಿದ್ದರೆ ಪರಿಸ್ಥಿತಿ ಇದಕ್ಕಿಂತ ಹೀನವಾಗಿರುತ್ತಿತ್ತು ಎಂದು ಟ್ರಂಪ್ ಪ್ರತಿದಾಳಿ ನಡೆಸಿದರು. ಬೈಡನ್ ದೇಶವನ್ನು ಸಂಪೂರ್ಣ ಮುಚ್ಚಲು ಹೊರಟಿದ್ದಾರೆ ಎಂದು ಟ್ರಂಪ್ ಆಪಾದಿಸಿದರು.

ಸುರಕ್ಷಿತ ಅಂತರ ಕಾಪಾಡುವ ವಿಚಾರದಲ್ಲಿ ಟ್ರಂಪ್ ನಿರ್ಲಕ್ಷ್ಯ ವಹಿಸಿದ್ದು, ಕೇವಲ ಮಾರುಕಟ್ಟೆ ದೃಷ್ಟಿಯನ್ನಷ್ಟೇ ಇಟ್ಟುಕೊಂಡಿದ್ದಾರೆ ಎಂದು ಬೈಡನ್ ದೂರಿದರು. ಆದರೆ ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳುವುದು, ಕೈಗಳನ್ನು ಪದೇ ಪದೇ ತೊಳೆಯುವುದು, ಮಾಸ್ಕ್ ಧರಿಸುವುದು ಮುಂತಾದ ಕ್ರಮಗಳನ್ನು ಜನರೇ ಕೈಗೊಂಡು ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಟ್ರಂಪ್ ಪ್ರತಿಪಾದಿಸಿದರು.

ಕೊರೋನ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಲಾಕ್‌ಡೌನ್ ಸಡಿಲಿಸಿದ್ದು, ಪರಿಸ್ಥಿತಿ ಬಿಗಡಾಯಿಸಲು ಕಾರಣ. ಆದಾಯ ಗಳಿಸುವ ದೃಷ್ಟಿಯಿಂದ ಟ್ರಂಪ್ ಶಾಲೆಗಳನ್ನು ತೆರೆದಿದ್ದಾರೆ ಎಂದು ಆಪಾದಿಸಿದರು.

ತೆರಿಗೆ ತಪ್ಪಿಸಿದ ಆರೋಪವನ್ನು ಬಲವಾಗಿ ತಳ್ಳಿಹಾಕಿದ ಟ್ರಂಪ್, ಅಧ್ಯಕ್ಷರಾಗುವ ಮುನ್ನ ನಾನು ಖಾಸಗಿ ಡೆವಲಪರ್ ಆಗಿದ್ದೆ. ಒಬಾಮಾ ಆಡಳಿತದ ನೀತಿಗೆ ಅನುಗುಣವಾಗಿ ತೆರಿಗೆ ಪಾವತಿಸಿದ್ದೇನೆ ಎಂದರು. ಇದನ್ನು ಬಲವಾಗಿ ಅಲ್ಲಗಳೆದ ವಿರೋಧಿ ಅಭ್ಯರ್ಥಿ, "ಶಾಲಾ ಶಿಕ್ಷಕರು ನೀಡುವುದಕ್ಕಿಂತಲೂ ಕಡಿಮೆ ತೆರಿಗೆಯನ್ನು ಟ್ರಂಪ್ ಪಾವತಿಸಿದ್ದಾರೆ" ಎಂದು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News