ಬೂಕರ್ ಬಗ್ಗೆ ಅನಗತ್ಯ ಬೊಬ್ಬೆ

Update: 2020-09-30 09:08 GMT

ಪ್ರತಿ ವರ್ಷದಂತೆಯೇ ಈ ವರ್ಷ ಕೂಡ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿರುವವರ ಹೆಸರುಗಳ ಪಟ್ಟಿ ಭಾರತದಲ್ಲಿ ಬಹಳಷ್ಟು ಕುತೂಹಲ ಮೂಡಿಸಿದೆ. ಆ ಪಟ್ಟಿಯಲ್ಲಿ ಭಾರತ ಸಂಜಾತ ಲೇಖಕರೊಬ್ಬರ ಹೆಸರಿದೆ. ಅದೇನಿದ್ದರೂ ಬೂಕರ್ ಪ್ರಶಸ್ತಿ ಪ್ರಕಟನೆಗಳು ಭಾರತದಲ್ಲಿ ಮುಖ್ಯವಾಗಿ ಬಹುತೇಕ ಇಂಗ್ಲಿಷ್ ಭಾಷಾ ಪ್ರಕಾಶಕರು, ಪುಸ್ತಕ ಮಾರಾಟಗಾರರು, ವಿಮರ್ಶಕರು, ಶಿಕ್ಷಣ ರಂಗದವರು ಹಾಗೂ ಓದುಗರನ್ನೊಳಗೊಂಡ ಒಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಬಹಳ ಕಾತುರದ ಸಂಗತಿಯಾಗಿರುತ್ತದೆ. ಪ್ರಶಸ್ತಿ ಘೋಷಣೆಯಾದ ಬಳಿಕ ಪ್ರಶಸ್ತಿ ಪಡೆದ ಕೃತಿ ಹಲವಾರು ಭಾರತೀಯ ಭಾಷೆಗಳಿಗೆ ಭಾಷಾಂತರಿಸಲ್ಪಡುತ್ತದೆ. ಹೀಗೆ, ಭಾಷಾಂತರಗೊಳ್ಳುವುದು ಒಂದು ಕಲಾತ್ಮಕ ಆಯ್ಕೆಗಿಂತ ಹೆಚ್ಚಾಗಿ ಪರಿಪೂರ್ಣವಾಗಿ ಒಂದು ಆರ್ಥಿಕ ನಿರ್ಧಾರವಾಗಿರುತ್ತದೆ.

ಬೂಕರ್ ಪ್ರಶಸ್ತಿಯ ಗೀಳು ವಿದೇಶಿ ಪ್ರಶಸ್ತಿಗಳು ಹಾಗೂ ನಾಮಕರಣದ ಬಗ್ಗೆ ನಮಗಿರುವ ಅತಿ ವ್ಯಾಮೋಹಕ್ಕೆ ಅನುಗುಣವಾಗಿಯೇ ಇದೆ. ಪುಸ್ತಕಗಳನ್ನು ಹಾಗೂ ಲೇಖಕರನ್ನು ವಿದೇಶದ ಪತ್ರಿಕೆಗಳು ಹಾಗೂ ಮಾಧ್ಯಮಗಳು ಉಲ್ಲೇಖಿಸಿದಾಗ ಒಂದು ರೀತಿಯ ನವ ವಸಾಹತುಶಾಹಿವಾದ ಅಥವಾ ಮನಸ್ಸಿನಲ್ಲಿ ಒಂದು ರೀತಿಯ ಸಾಮ್ರಾಜ್ಯಶಾಹಿವಾದ ಸ್ಥಾಪಿತವಾಗುತ್ತದೆ. ಈ ಹಿಂದೆ ಕಾಮನ್ವೆಲ್ತ್ ರಾಷ್ಟ್ರಗಳಾಗಿದ್ದ ದೇಶಗಳ ಹಲವು ಲೇಖಕರು ವಿದೇಶಿ ಪತ್ರಿಕೆಗಳಿಗೆ ಬರೆಯಲು ಹಾತೊರೆಯುತ್ತಾರೆ. ಆ ಮೂಲಕ ಪ್ರಶಸ್ತಿ ಗಿಟ್ಟಿಸಲು ಪ್ರಯತ್ನಿಸುತ್ತಾರೆ. ಪ್ರಶಸ್ತಿ ಪಡೆದ ಕೃತಿಯ ಸತ್ವದ ಚರ್ಚೆ ನಡೆಯುವುದು ಕಡಿಮೆ. ಪ್ರಶಸ್ತಿಗಳ ಮೂಲಕ ಒಂದು ರೀತಿಯ ಗುಲಾಮಿ ಭಾವನೆ ಮುಂದುವರಿಯುವಂತೆ ನೋಡಿಕೊಳ್ಳಲಾಗುತ್ತದೆ. ಪ್ರಶಸ್ತಿಗಳು ಕೆಲವು ತೀರ್ಪುಗಾರರ ಇಷ್ಟ ಹಾಗೂ ಇಷ್ಟವಿಲ್ಲದಿರುವಿಕೆಯನ್ನವಲಂಬಿಸಿ ನೀಡಲಾಗುವವುಗಳು ಎಂಬುದನ್ನು ನಾವು ಮರೆಯಕೂಡದು. ಅಲ್ಲದೆ ಬೂಕರ್ ಪ್ರಶಸ್ತಿ ಭಾರತದಲ್ಲಿ ಜನರ ಓದುವಿಕೆ ಅಥವಾ ಬರವಣಿಗೆಯ ಕ್ಷೇತ್ರವನ್ನು, ರಂಗವನ್ನು ಪ್ರಭಾವಿಸಿದೆಯೇ ಅಥವಾ ಈ ನಿಟ್ಟಿನಲ್ಲಿ ನಿಜವಾಗಿಯೂ ಎಷ್ಟು ನೆರವಾಗಿದೆ? ಎಂಬ ಪ್ರಶ್ನೆಯೂ ಏಳುತ್ತದೆ. ಬೂಕರ್ ಪ್ರಶಸ್ತಿಯು ಪ್ರಶಸ್ತಿಗಳನ್ನು ಗಳಿಸಲಿಕ್ಕಾಗಿಯೇ ಬರೆಯುವ ಲೇಖಕರ ಒಂದು ವರ್ಗವನ್ನು ಸೃಷ್ಟಿಸಿದೆ. ಪಾಶ್ಚಾತ್ಯ ಜಗತ್ತು ಪೌರಾತ್ಯ ಅಥವಾ ಉಳಿದ ಇತರ ಜಗತ್ತನ್ನು ಹೇಗೆ ಕಲ್ಪಿಸಿಕೊಳ್ಳುತ್ತದೆ ಎಂಬುದಕ್ಕೆ ಅನುಗುಣವಾಗಿ ಈ ಲೇಖಕರ ಬರವಣಿಗೆ ಇರಬೇಕಾಗುತ್ತದೆ. ಲಿಂಗ (ಜೆಂಡರ್), ಬಣ್ಣ, ಜಾತಿ, ತಿಕ್ಕಾಟ ಇತ್ಯಾದಿಗಳು ಇವರ ಬರವಣಿಗೆಗಳಲ್ಲಿ ಇರಬೇಕಾಗುತ್ತದೆ. ಆಗ ಮಾತ್ರ ತೀರ್ಪುಗಾರರು 'ಟಿಕ್' ಗುರುತು ಹಾಕಲು ಒಂದು ಕಾದಂಬರಿ ಅರ್ಹವಾಗುತ್ತದೆ.

ಬೂಕರ್ ಪ್ರಶಸ್ತಿ ಅಥವಾ ಇನ್ಯಾವುದೇ ದೊಡ್ಡ ಪ್ರಶಸ್ತಿ ಭಾರತದಲ್ಲಿ ಓದುಗರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಬಹಳಷ್ಟನ್ನೇನೂ ಮಾಡಿಲ್ಲ. ಬೂಕರ್ ಪ್ರಶಸ್ತಿಯ ಆಧಾರದಲ್ಲಿ ಕೆಲವು ಲೇಖಕರು ಶಾಶ್ವತವಾದ ಸೆಲೆಬ್ರಿಟಿ ಸ್ಥಾನಮಾನ ಪಡೆಯುತ್ತಾರೆ. ಪ್ರಶಸ್ತಿ ಗೀಳಿನ ಈ ಸಂಸ್ಕೃತಿ, ಓದುವಿಕೆ ಹಾಗೂ ಬರವಣಿಗೆಯ ಬಗ್ಗೆ ಸಂಭಾಷಣೆ, ಚರ್ಚೆ ನಡೆಯದಂತೆ ತಡೆಯುವ ಒಂದು ಟ್ರ್ಯಾಪ್ ಆಗಿದೆ. ಪ್ರಶಸ್ತಿಯ ಪರಿಣಾಮವಾಗಿ ಲೇಖಕನ ಅಥವಾ ಲೇಖಕಿಯ ಬರವಣಿಗೆ ಅಮುಖ್ಯವಾಗಿ ಲೇಖ ಅಥವಾ ಲೇಖಕಿಯೇ ರಾರಾಜಿಸುತ್ತಾರೆ.

ಭಾರತದಲ್ಲಿ ಸಾಹಿತ್ಯ ಪ್ರತಿಭೆಯನ್ನು ನಿರಂತರವಾಗಿ ಗುರುತಿಸಿ, ಗೌರವಿಸುವ ಹಲವಾರು ಪ್ರಶಸ್ತಿಗಳು ಅನೇಕ ಭಾರತೀಯ ಭಾಷೆಗಳಲ್ಲಿವೆ. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಈ ಪ್ರಶಸ್ತಿಗಳಿಗೆ ಸಾಕಷ್ಟು ಪ್ರಚಾರವೇ ದೊರಕುವುದಿಲ್ಲ. ಈ ಅಂತರವನ್ನು ತುಂಬಲು ನಾವು ಪ್ರಶಸ್ತಿ ವಿಜೇತ ಕೃತಿಗಳ ಅನುವಾದಕ್ಕೆ ಕಾಯಬೇಕಾಗುತ್ತದೆ. ಭಾರತೀಯ ಭಾಷೆಗಳಿಂದ ಇಂಗ್ಲಿಷ್‌ಗೆ ಅನುವಾದಗೊಳ್ಳುವ ಕೃತಿಗಳ ಸಂಖ್ಯೆಯಲ್ಲಿ ಏರಿಕೆಯಾದರೂ ಭಾರತದ ನಗರವಾಸಿ ಮುಖ್ಯವಾಹಿನಿ ಓದುಗರು ಓದಲು ಇಷ್ಟಪಡುವಂತಹ ಕೃತಿಗಳು ಮಾತ್ರ ಭಾಷಾಂತರಕ್ಕೆ ಆಯ್ಕೆಯಾಗುತ್ತವೆ. ಭಾಷಾಂತರದ ಈ ಮಿತಿಯನ್ನು ನಾವು ಹೇಗೆ ಸರಿದೂಗಿಸಬಹುದೆಂದು ಯೋಚಿಸಬೇಕಾಗಿದೆ.

ನಾವು ನಮ್ಮದೇ ಆದ ಸಾಹಿತ್ಯವನ್ನು ಗಮನಿಸದೆ ವಿದೇಶಿ ಹಾಗೂ ನಮ್ಮ ಸಾಹಿತ್ಯಕ್ಕಿಂತ ಭಿನ್ನವಾದ ಸಾಹಿತ್ಯವನ್ನು ಓದಲು, ಅರ್ಥ ಮಾಡಿಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿರುತ್ತೇವೆ. ಸಾಹಿತ್ಯ ನಮ್ಮ ಅರಿವಿನ ದಿಗಂತವನ್ನು, ಅನುಭವವನ್ನು ವಿಸ್ತರಿಸಲು ನೆರವಾಗುತ್ತದೋ? ಇಲ್ಲವೋ? ಎಂಬ ಬಗ್ಗೆ ಬಹಳ ಚರ್ಚೆ ನಡೆಯುತ್ತಿರುತ್ತದೆ.ಅದೇನಿದ್ದರೂ ಈ ನಿಟ್ಟಿನಲ್ಲಿ ಸ್ಥಳೀಯ ಜ್ಞಾನ ವ್ಯವಸ್ಥೆಗಳನ್ನು ಹಾಗೂ ಬರಹ ಸಂಸ್ಕೃತಿಗಳನ್ನು ಅವಗಣನೆ ಮಾಡಿ, ವಿದೇಶಿ ಸಾಹಿತ್ಯ, ಸಂಸ್ಕೃತಿಗೆ ಮಣೆ ಹಾಕುವುದು ಸರಿಯಲ್ಲ. ಸಾಹಿತ್ಯದ ಮೂಲಕ ವಿಭಿನ್ನ ಸಂಸ್ಕೃತಿಗಳ ನಡುವೆ ಸೇತುವೆ ನಿರ್ಮಿಸುವ ಬಗ್ಗೆ ನಾವು ಆಗಾಗ ಮಾತಾಡುತ್ತೇವೆ. ಇಂತಹ ಸೇತುವೆ ನಿರ್ಮಾಣ ಸ್ವಾಗತಾರ್ಹವಾದರೂ, ವಿದೇಶಿ ಪ್ರಶಸ್ತಿಗಳಿಗೆ ಹಾಗೂ ಪ್ರಶಸ್ತಿಯ ತೀರ್ಪುಗಾರರಿಗೆ ನಾವು, ನಮ್ಮ ಕಲ್ಪನೆ ಸೆರೆಯಾಳಾಗಕೂಡದು. ಓದುಗರಾಗಿ ಹಾಗೂ ಚಿಂತಕರಾಗಿ ನಮ್ಮ ಬದುಕನ್ನು ಉತ್ತಮಗೊಳಿಸಲು ಈ ಪ್ರಶಸ್ತಿಗಳೇನು ಬಹಳ ದೊಡ್ಡ ಕೆಲಸ ಮಾಡುವುದಿಲ್ಲ. ಯಾಕೆಂದರೆ ನಮ್ಮ ದೇಶ ಇಂಗ್ಲಿಷ್ ಮಾತನಾಡುವ ಹಾಗೂ ಬರೆಯುವ ಜಗತ್ತನ್ನು ಮೀರಿದ ಹಲವು ರೀತಿಯ ಸಾಹಿತ್ಯಿಕ ಸಂಸ್ಕೃತಿಗಳಿಗೆ ಆಗರವಾಗಿರುವ ಒಂದು ದೇಶ ಎಂಬುದನ್ನು ನಾವು ಮರೆಯಕೂಡದು.

ಕೃಪೆ: thehindu

Writer - ಕುನಾಲ್ ರೇ

contributor

Editor - ಕುನಾಲ್ ರೇ

contributor

Similar News