ರಾಹುಲ್ ಗಾಂಧಿ ಸ್ಪರ್ಧಿಸಿದರೂ ಗೆಲುವು ಬಿಜೆಪಿಯದ್ದೆ: ಸಚಿವ ಸೋಮಶೇಖರ್

Update: 2020-09-30 11:33 GMT

ಬೆಂಗಳೂರು, ಸೆ. 30: ಇಲ್ಲಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಸ್ಪರ್ಧಿಸಿದರೂ ಅಲ್ಲಿ ಬಿಜೆಪಿ ಅಭ್ಯರ್ಥಿಯೆ ಗೆಲುವು ಸಾಧಿಸಲಿದ್ದಾರೆಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ.

ಬುಧವಾರ ಬಿಬಿಎಂಪಿಯಿಂದ ಇಲ್ಲಿನ ಕೆಂಗೇರಿಯಲ್ಲಿ ಏರ್ಪಡಿಸಿದ್ದ ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಅವರು, ಆರ್.ಆರ್. ನಗರ ಕ್ಷೇತ್ರದ ಉಪ ಚುನಾವಣೆ ಗೆಲ್ಲಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಯಾವುದೇ ತಂತ್ರಗಾರಿಕೆ ಮಾಡಿದರೂ ಅದನ್ನು ಎದುರಿಸುವ ಕಲೆ ನಮಗೂ ಗೊತ್ತಿದೆ. ಮುನಿರತ್ನ ಅವರು ನಮ್ಮ ಜೊತೆಯಲ್ಲಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷ ಅಧಿಕಾರಕ್ಕೇರಲು ಸಹಕಾರ ನೀಡಿದ್ದಾರೆ. ಅವರ ತ್ಯಾಗ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದರು.

ಈಗಾಗಲೇ ಸಿಎಂ ಬಿಎಸ್‍ವೈ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಬಿಜೆಪಿಯಿಂದ ಟಿಕೆಟ್ ಕೊಡಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು ಎಂದ ಅವರು, ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉತ್ತರ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಜಿ.ಮುನಿರಾಜು ಮಾತನಾಡಿ, ಕೆಂಗೇರಿ ಉಲ್ಲಾಳು ವಾರ್ಡ್ ಸಮಗ್ರ ಅಭಿವೃದ್ಧಿಗೆ ಸಹಕಾರ ಸಚಿವರ ದೂರದೃಷ್ಟಿ ಚಿಂತನೆ ಕಾರಣ. ವಾರ್ಡ್ ವ್ಯಾಪ್ತಿಯ ಹಲವಾರು ಬಡಾವಣೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ ನಾಗರೀಕರ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು. ಯಶವಂತಪುರ ಕ್ಷೇತ್ರ ಬಿಜೆಪಿ ನಗರ ಮಂಡಲ ಅಧ್ಯಕ್ಷ ಅನಿಲ್ ಚಳಗೇರಿ, ಪ್ರಧಾನ ಕಾರ್ಯದರ್ಶಿ ವಾಜರಹಳ್ಳಿ ಶಶಿಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ರಾಜರಾಜೇಶ್ವರಿ ನಗರ ಮತ್ತು ಶಿರಾ ಎರಡೂ ಕ್ಷೇತ್ರಗಳ ಉಪ ಚುನಾವಣೆಗೆ ಒಮ್ಮತದ ಅಭ್ಯರ್ಥಿಯನ್ನೇ ಪಕ್ಷ ಆಯ್ಕೆ ಮಾಡಲಿದೆ. ಬಿಜೆಪಿ ಕೋರ್ ಕಮಿಟಿ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಲಿದ್ದು, ಕೇಂದ್ರ ಸಂಸದೀಯ ಮಂಡಳಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಿದೆ. ಉಪ ಚುನಾವಣೆ ಜೊತೆಗೆ ನಾಲ್ಕು ಮೇಲ್ಮನೆ ಕ್ಷೇತ್ರಗಳ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದ್ದು ಸವಾಲಾಗಿ ಸ್ವೀಕರಿಸಿದೆ. ಬಿಎಸ್‍ವೈ ನೇತೃತ್ವದಲ್ಲಿ ಚುನಾವಣೆ ಗೆಲ್ಲುವ ಮೂಲಕ ನಮ್ಮ ಸಾಮರ್ಥ್ಯ ತೋರಿಸಲಿದ್ದೇವೆ'

-ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News