ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಶೇ.41 ಸೆಪ್ಟಂಬರ್‌ನಲ್ಲಿ ಸೇರ್ಪಡೆ!

Update: 2020-10-01 03:41 GMT

ಹೊಸದಿಲ್ಲಿ, ಅ.1: ದೇಶದಲ್ಲಿ ಇದುವರೆಗೆ ವರದಿಯಾಗಿರುವ ಒಟ್ಟು ಕೋವಿಡ್-19 ಪ್ರಕರಣಗಳ ಪೈಕಿ ಶೇಕಡ 41ರಷ್ಟು ಪ್ರಕರಣಗಳು ಸೆಪ್ಟಂಬರ್‌ನಲ್ಲಿ ವರದಿಯಾಗಿವೆ. ಆದರೆ ದೇಶದಲ್ಲಿ ಸತತ ಎರಡನೇ ದಿನವೂ ಸೋಂಕಿತರ ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.

ದೇಶದಲ್ಲಿ ಬುಧವಾರ 1,173 ಮಂದಿ ಮೃತಪಟ್ಟಿದ್ದು, ಸಾಂಕ್ರಾಮಿಕ ದೇಶದಲ್ಲಿ ವ್ಯಾಪಿಸಿದ ಬಳಿಕ ಸೆಪ್ಟಂಬರ್‌ ಅತಿಹೆಚ್ಚು ಸಾವು ಸಂಭವಿಸಿದ ತಿಂಗಳು ಎನಿಸಿಕೊಂಡಿದೆ. ಸಾಂಕ್ರಾಮಿಕದಿಂದ ಮೃತಪಟ್ಟ ಒಟ್ಟು ಸೋಂಕಿತರ ಪೈಕಿ ಶೇಕಡ 34ರಷ್ಟು ಮಂದಿ ಸೆಪ್ಟಂಬರ್‌ನಲ್ಲಿ ಅಸುನೀಗಿದ್ದಾರೆ.

ದೇಶದಲ್ಲಿ ಕೋವಿಡ್-19 ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 98,628ಕ್ಕೇರಿದ್ದು, ಈ ಪೈಕಿ ಶೇಕಡ 33.7ರಷ್ಟು ಅಂದರೆ 33,255 ಮಂದಿ ಸೆಪ್ಟಂಬರ್‌ನಲ್ಲಿ ಮೃತಪಟ್ಟಿದ್ದಾರೆ. ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ದಾಖಲಾಗಿದ್ದ 28,859 ಸಾವು ಗರಿಷ್ಠ ಎನಿಸಿತ್ತು. ಜುಲೈನಲ್ಲಿ 19,122, ಜೂನ್‌ನಲ್ಲಿ 11,988 ಮತ್ತು ಮೇ ತಿಂಗಳಲ್ಲಿ 4,267 ಮಂದಿ ಮೃತರಾಗಿದ್ದರು.

ದೇಶದಲ್ಲಿ ಬುಧವಾರ 86,768 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 63 ಲಕ್ಷದ ಗಡಿ ದಾಟಿದ್ದು, 63,06,802 ಆಗಿದೆ. ಸೆಪ್ಟಂಬರ್‌ನಲ್ಲಿ ಒಟ್ಟು 26,24,179 ಪ್ರಕರಣಗಳು ವರದಿಯಾಗಿವೆ. ಆಗಸ್ಟ್‌ನಲ್ಲಿ 19,87,705 ಪ್ರಕರಣಗಳು ಕಾಣಿಸಿಕೊಂಡಿದ್ದವು. ಸಕ್ರಿಯ ಪ್ರಕರಣಗಳ ಸಂಖ್ಯೆ ಅಲ್ಪಮಟ್ಟಿಗೆ ಹೆಚ್ಚಳವಾಗಿದೆ. ದೇಶದಲ್ಲಿ ಬುಧವಾರ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 9,47,041 ಇದ್ದು, ಮಂಗಳವಾರ ಈ ಸಂಖ್ಯೆ 9,46,477 ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News