ಕಾರ್ಮಿಕರಿಗೆ ‘ಓಟಿ’ ವೇತನ ನೀಡಬೇಕಿಲ್ಲ ಎಂಬ ಗುಜರಾತ್ ಸರಕಾರದ ಆದೇಶ ವಜಾಗೊಳಿಸಿದ ಸುಪ್ರೀಂ

Update: 2020-10-01 09:36 GMT

ಹೊಸದಿಲ್ಲಿ: ಓವರ್‍ಟೈಮ್ ವೇತನ ನೀಡುವುದರಿಂದ ಫ್ಯಾಕ್ಟರಿಗಳಿಗೆ ವಿನಾಯಿತಿ ನೀಡಿದ್ದ ಗುಜರಾತ್ ಸರಕಾರದ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆಯಲ್ಲದೆ ಕೊರೋನವೈರಸ್ ಸಾಂಕ್ರಾಮಿಕದ ನೆಪವೊಡ್ಡಿ ಕಾರ್ಮಿಕ ಕಾನೂನುಗಳ ನಿಬಂಧನೆಗಳನ್ನು ತೆಗೆದುಹಾಕುವಂತಿಲ್ಲ ಹಾಗೂ ಕಾರ್ಮಿಕರ ಹಕ್ಕುಗಳನ್ನು ಕಸಿಯುವಂತಿಲ್ಲ ಎಂದು ಹೇಳಿದೆ.

ಕೊರೋನವೈರಸ್ ಸಮಸ್ಯೆಯು ಫ್ಯಾಕ್ಟರೀಸ್ ಕಾಯಿದೆಯನ್ವಯ ದೇಶದ ಭದ್ರತೆಗೆ ಅಪಾಯವೊಡ್ಡುವಂತಹ ಸಾರ್ವಜನಿಕ ತುರ್ತು ಪರಿಸ್ಥಿತಿಯಲ್ಲ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಕೆ ಎಮ್ ಜೋಸೆಫ್ ಹಾಗೂ ಇಂದು ಮಲ್ಹೋತ್ರ ಅವರನ್ನೊಳಗೊಂಡ ಪೀಠ ಹೇಳಿದೆ. ಆರ್ಥಿಕ ನಿಧಾನಗತಿಯ ಸಂಪೂರ್ಣ ಹೊರೆಯನ್ನು ಕಾರ್ಮಿಕರ ಮೇಲೆ ಹೊರಿಸುವಂತಿಲ್ಲ ಎಂದೂ ನ್ಯಾಯಾಲಯ ಹೇಳಿದೆ. ಗುಜರಾತ್ ಸರಕಾರದ ಕ್ರಮದ ವಿರುದ್ಧ ಗುಜರಾತ್ ಮಜ್ದೂರ್ ಸಭಾ ಹಾಗೂ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ  ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದವು.

ಎಪ್ರಿಲ್ ತಿಂಗಳಲ್ಲಿ ಗುಜರಾತ್ ಸರಕಾರವು ಕಾರ್ಮಿಕ ಕಾನೂನಿನ ಸೆಕ್ಷನ್ 5ರ ಅನ್ವಯ ಪ್ರದತ್ತ ಅಧಿಕಾರ ಚಲಾಯಿಸಿ  ಓವರ್‍ಟೈಮ್ ಕೆಲಸ ಮಾಡಿದಾಗ ಎರಡು ಪಟ್ಟು ಅಧಿಕ ವೇತನ ನೀಡುವ ಅಗತ್ಯವಿಲ್ಲ ಹಾಗೂ ಸಾಮಾನ್ಯ ಕೆಲಸದ ಅವಧಿಗೆ ನೀಡುವಷ್ಟೇ ವೇತನ ನೀಡಿದರೆ ಸಾಕು ಎಂದಿತ್ತಲ್ಲದೆ ಫ್ಯಾಕ್ಟರಿಗಳಿಗೆ ಈ ಕಾಯಿದೆಯ ನಿಬಂಧನೆಗಳಿಂದ ವಿನಾಯಿತಿ ನೀಡಿತ್ತು. ಸಾರ್ವಜನಿಕ ತುರ್ತುಪರಿಸ್ಥಿತಿಯ ಸಂದರ್ಭ ಮಾತ್ರ ಇಂತಹ ಕ್ರಮ ನಿಯಮ ಪ್ರಕಾರ ಕೈಗೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News