ಗಂಭೀರ ಅಪರಾಧ ಪ್ರಕರಣ: ಗೂಂಡಾ ಕಾಯ್ದೆಯಡಿ 7 ರೌಡಿಗಳ ಬಂಧನ

Update: 2020-10-01 12:12 GMT

ಬೆಂಗಳೂರು, ಅ.1: ಗಂಭೀರ ಅಪರಾಧ ಆರೋಪ ಪ್ರಕರಣ ಸಂಬಂಧ ಏಳು ಮಂದಿ ರೌಡಿಗಳನ್ನು ಗೂಂಡಾ ಕಾಯ್ದೆಯಡಿ ನಗರ ಪೊಲೀಸರು ಬಂಧಿಸಿದ್ದಾರೆ.

ವಿನಯ್ ಕುಮಾರ್(30), ದಯಾನಂದ್(28), ಶ್ರೀಕಾಂತ್(30), ಖಲೀಲ್ ಅಹ್ಮದ್(35), ಸುಹೇಲ್(34), ರಿಝ್ವಾನ್(35) ಮತ್ತು ಅನೀಸ್ ಅಹ್ಮದ್(30) ಗುಂಡಾ ಕಾಯ್ದೆಯಡಿ ಬಂಧಿತರಾಗಿರುವ ರೌಡಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆಗಳನ್ನು ಹತ್ತಿಕ್ಕುವ ಸಲುವಾಗಿ ಕೇಂದ್ರ ವಿಭಾಗ, ಪೂರ್ವ, ಉತ್ತರ ಮತ್ತು ದಕ್ಷಿಣ ವಿಭಾಗಗಳಲ್ಲಿ ರೌಡಿ ಚಟುವಟಿಕೆ ನಡೆಸುತ್ತಿದ್ದ 7 ರೌಡಿಗಳನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಗೂಂಡಾ ಕಾಯ್ದೆಯಡಿ ಬಂಧಿಸಲಾದ ರೌಡಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕೊಲೆ, ಕೊಲೆ ಪ್ರಯತ್ನ, ಸುಲಿಗೆ, ಹಲ್ಲೆ, ಅಪಹರಣ, ಸಾಕ್ಷಿಗಳಿಗೆ ಬೆದರಿಕೆ ಹಾಕುವುದು ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡುವ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಆರೋಪಿ ದಯಾನಂದ್ ಅಶೋಕನಗರ ಮತ್ತು ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 7 ವರ್ಷಗಳಿಂದ ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು, ಸುಲಿಗೆ, ಕೊಲೆ ಪ್ರಯತ್ನ, ಗಾಂಜಾ ಮಾರಾಟ ಹಲ್ಲೆ ಸೇರಿದಂತೆ 13 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಈತನನ್ನು ಸೆ.16ರಂದು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಆರೋಪಿ ವಿನಯ್ ಕುಮಾರ್ ಸಹ ಹಲವು ವರ್ಷಗಳಿಂದಲೂ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ, ಸುಲಿಗೆ ಹಲ್ಲೆ, ಕೊಲೆ ಯತ್ನ ಸೇರಿ 17 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. 2015ರಲ್ಲಿ ಒಂದು ವರ್ಷ ಗೂಂಡಾ ಕಾಯ್ದೆಯಡಿ ಬಂಧನ ಮಾಡಲಾಗಿತ್ತು.

ಬಿಡುಗಡೆ ನಂತರ ಕಳೆದ ಮೂರು ವರ್ಷಗಳಲ್ಲಿ 6 ಗಂಭೀರ ಕೃತ್ಯಗಳಲ್ಲಿ ಭಾಗಿಯಾಗಿದ್ದನು. ಸೆ.2ರಂದು ಬಂಧನ ಆದೇಶ ಮಾಡಲಾಗಿದೆ. ಮತ್ತೋರ್ವ ಶ್ರೀಕಾಂತ ಸಹ 2012ರಿಂದಲೂ ವೈಯಾಲಿಕಾವಲ್, ಮಲ್ಲೇಶ್ವರಂ ಸುಬ್ರಹ್ಮಣ್ಯನಗರ, ಜ್ಞಾನಭಾರತಿ ಹಾಗೂ ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಕೊಲೆ, ಸುಲಿಗೆ, ಅಪಹರಣ, ಹಲ್ಲೆ, ಕೊಲೆ ಪ್ರಯತ್ನ ಸೇರಿದಂತೆ 15 ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪವಿದ್ದು, ಈತನ ವಿರುದ್ಧ ಸೆ.16ರಂದು ಬಂಧನ ಆದೇಶ ಜಾರಿಗೊಳಿಸಿದೆ.

ಆರೋಪಿ ಖಲೀಲ್ ಅಹ್ಮದ್ 2006ರಿಂದಲೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು, ಕೆಜಿಹಳ್ಳಿ, ಮೈಸೂರು ನಗರ ಉದಯಗಿರಿ ಪೊಲೀಸ್ ಠಾಣೆಗಳ ಕೊಲೆ ಪ್ರಯತ್ನ, ಸುಲಿಗೆ, ಹಲ್ಲೆ, ಅಪಹರಣ, ಆರ್ಮ್ಸ್ ಆಕ್ಟ್ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪವಿದೆ. ಸೆ.19ರಂದು ಬಂಧನ ಆದೇಶ ನೀಡಲಾಗಿದೆ.

ಸುಹೇಲ್ ವಿರುದ್ಧ ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಹೈ ಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಪ್ರಯತ್ನ, ಸುಲಿಗೆ, ಹಲ್ಲೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡುವುದು ಸೇರಿದಂತೆ 7 ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಇದೆ. ಈತನ ವಿರುದ್ಧ ಸೆ.23ರಂದು ಬಂಧನ ಆದೇಶ ಜಾರಿಗೊಳಿಸಲಾಗಿದೆ.

ರಿಝ್ವಾನ್ ವಿರುದ್ಧ 2004ರಿಂದ ಕೊಲೆ, ಸುಲಿಗೆ, ಕೊಲೆ ಪ್ರಯತ್ನ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡುವುದು, ಸಾಕ್ಷಿದಾರರಿಗೆ ಬೆದರಿಕೆ ಹಾಕುವುದು ಸೇರಿದಂತೆ 14 ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಇದ್ದು, ಸೆ.25ರಂದು ಬಂಧನ ಆದೇಶ ಜಾರಿಗೊಳಿಸಲಾಗಿದೆ.

ಇನ್ನು, ಅನೀಸ್ ಅಹ್ಮದ್, 2010ರಿಂದ ಕೊಲೆ, ದರೋಡೆ, ಅಪಹರಣ, ಹಲ್ಲೆ, ಕೊಲೆ ಯತ್ನ, ಸುಲಿಗೆ, ಪೊಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸೇರಿದಂತೆ 16 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದ್ದು, ಸೆ.30ರಂದು ಬಂಧನ ಆದೇಶ ಜಾರಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News