ಬೆಂಗಳೂರು: ಉತ್ತರ ಪ್ರದೇಶ ಸರಕಾರ ವಜಾಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಧರಣಿ

Update: 2020-10-01 12:20 GMT

ಬೆಂಗಳೂರು, ಅ.1: ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ನಡೆದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ, ಕೊಲೆ ಖಂಡಿಸಿ ವಿವಿಧ ವಿದ್ಯಾರ್ಥಿಗಳು, ಮಹಿಳಾ ಪರ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಭಾರೀ ಪ್ರತಿಭಟನೆ ನಡೆಸಿ, ಉತ್ತರ ಪ್ರದೇಶದ ಸರಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿದರು.

ಗುರುವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲುಓ), ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‍ಎಫ್‍ಐ), ದಲಿತ ಹಕ್ಕುಗಳ ಸಮಿತಿ(ಡಿಎಚ್‍ಎಸ್) ಅಖಿಲ ಭಾರತ ವಕೀಲರ ಸಂಘ(ಎಐಎಲ್‍ಯು), ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಎಸ್‍ಯುಸಿಐ) ಸಂಘಟನೆಗಳು ಸೇರಿದಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೂರಾರು ಸದಸ್ಯರು ಪ್ರತಿಭಟನೆ ನಡೆಸಿ, ಕೇಂದ್ರ ಮತ್ತು ಉತ್ತರ ಪ್ರದೇಶ ಸರಕಾರಗಳ ಆಡಳಿತ ವೈಫಲ್ಯವನ್ನು ಟೀಕಿಸಿದರು.

ತೆಲಂಗಾಣದಲ್ಲಿ ಕೆಲ ತಿಂಗಳ ಹಿಂದೆ ನಡೆದ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ಈ ಘಟನೆಯಲ್ಲಿ ಶಾಮೀಲಾದವರನ್ನು ಕೂಡ ಅದೇ ರೀತಿ ಎನ್‍ಕೌಂಟರ್ ಮಾಡಬೇಕು. ಆಗ ಯಾರೊಬ್ಬರೂ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲು ಮುಂದಾಗುವುದಿಲ್ಲ. ದೇಶದಲ್ಲಿ ಮಹಿಳೆಯರು, ಅದರಲ್ಲೂ ದಲಿತರು ಸುರಕ್ಷಿತವಾಗಿಲ್ಲ. ದೇಶದ ಎಲ್ಲ ರಾಜ್ಯ ಸರಕಾರಗಳು, ಪೊಲೀಸ್ ಅಧಿಕಾರಿಗಳು ಕನಿಷ್ಠ ಮಾನವೀಯತೆಯಿಂದ ವರ್ತಿಸಿ, ಎಲ್ಲ ಮಹಿಳೆಯರಿಗೂ ಸುರಕ್ಷತೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಹಕ್ಕೊತ್ತಾಯ ಮಂಡಿಸಿದರು.

ಕೆಳ ವರ್ಗಕ್ಕೆ ಸೇರಿದ ಯುವತಿಯ ಮೇಲೆ ಬಲಾತ್ಕಾರ ಮಾಡಿ ಆಕೆಯ ಹತ್ಯೆ ಮಾಡಲಾಗಿದೆ. ಬಳಿಕ ಅವರ ಕುಟುಂಬ ಸದಸ್ಯರನ್ನು ದೂರವಿಟ್ಟು ತಡರಾತ್ರಿ ಪೊಲೀಸರೇ ಆಕೆಯ ಶವವನ್ನು ಸುಟ್ಟು ಹಾಕಿದ್ದಾರೆ. ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ನೆರವಾಗಿದ್ದಾರೆ. ನಿಜಕ್ಕೂ ಇದು ಪೈಶಾಚಿಕ ಕೃತ್ಯ. ಇದು ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ. ಕೂಡಲೇ ರಾಷ್ಟ್ರಪತಿ ಅವರು ಈ ಕೂಡಲೇ ಸರಕಾರವನ್ನು ವಜಾಗೊಳಿಸಬೇಕೆಂದು ಪ್ರತಿಭಟನಾ ನಿರತ ಚಿಂಕತರು ಆಗ್ರಹಿಸಿದರು.

ಈ ಪೈಶಾಚಿಕ ಕೃತ್ಯದಿಂದ ಮನುಷ್ಯಕುಲ ತಲೆತಗ್ಗಿಸುವಂತಾಗಿದೆ. ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದರೂ ಅಲ್ಲಿನ ಸರಕಾರ ಮೌನ ವಹಿಸಿರುವುದು ಸರಿಯಲ್ಲ. ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐಗೆ ವಹಿಸಿ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.

ಪ್ರತಿಭಟನೆಯುದ್ದಕ್ಕೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದಲಿತ ಮುಖಂಡ ಮಾವಳ್ಳಿ ಶಂಕರ್, ಸಿಐಟಿಯು ಅಧ್ಯಕ್ಷೆ ವರಲಕ್ಷ್ಮೀ, ಡಿಎಚ್‍ಎಸ್ ಮುಖಂಡ ಮೋಹನ್ ರಾಜ್, ದಲಿತ ಹಕ್ಕುಗಳ ಸಮಿತಿಯ ನಾಗಣ್ಣ, ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ವಾಸುದೇವ್ ರೆಡ್ಡಿ, ಆಲ್ ಇಂಡಿಯಾ ಲಾಯರ್ಸ್ ಯುನಿಯನ್ ರಾಜ್ಯ ಸಮಿತಿ ಸದಸ್ಯ ಶರಣ ಬಸಪ್ಪ ಮರದ್, ಎಐಎಂಎಂಎಸ್ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಸ್.ಶೋಭಾ ಮುಂತಾದವರು ಭಾಗವಹಿಸಿದ್ದರು.

‘ಆದಿತ್ಯನಾಥ್ ರಾಜೀನಾಮೆ ನೀಡಲಿ'

ತಳ ಸಮುದಾಯದ ಯುವತಿಯರ ಮೇಲೆ ಸತತವಾಗಿ ಅತ್ಯಾಚಾರಗಳು ನಡೆಯುತ್ತಿದ್ದರೂ ಅಲ್ಲಿನ ಸರಕಾರ ಅದನ್ನು ತಡೆಯುವಲ್ಲಿ ವಿಫಲವಾಗಿದೆ. ಈ ಕೂಡಲೇ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಲಿ.

-ಗೌರಮ್ಮ, ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ

ಉತ್ತರ ಪ್ರದೇಶವೊಂದು ಗೂಂಡಾ ರಾಜ್ಯದಂತಾಗಿದ್ದು ಅಲ್ಲಿ ನೆಲದ ಕಾನೂನುಗಳಿಗೆ ಬೆಲೆಯೇ ಇಲ್ಲದ ಜಂಗಲ್ ರಾಜ್ ಆಗಿದೆ.

-ಎಂ.ಎನ್.ಶ್ರೀರಾಂ, ಎಸ್.ಯು.ಸಿ.ಐ ಜಿಲ್ಲಾ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News