ಗುರು ರಾಘವೇಂದ್ರ ಬ್ಯಾಂಕ್ ಅವ್ಯವಹಾರದಲ್ಲಿ ನಿವೃತ್ತ ಸರಕಾರಿ ಅಧಿಕಾರಿಗಳು ಸೇರಿ 38 ಮಂದಿ ಭಾಗಿ

Update: 2020-10-01 14:55 GMT

ಬೆಂಗಳೂರು, ಅ.1: ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ಪ್ರಕರಣದಲ್ಲಿ ಬ್ಯಾಂಕ್‍ನ ಹಾಲಿ, ಮಾಜಿ ಪದಾಧಿಕಾರಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ನಿವೃತ್ತ ಸರಕಾರಿ ಅಧಿಕಾರಿಗಳು ಸೇರಿ 38 ಮಂದಿ ಆರೋಪಿಗಳು ಭಾಗಿಯಾಗಿರುವುದು ಸಿಐಡಿ ತನಿಖೆಯಲ್ಲಿ ಬಹಿರಂಗವಾಗಿದೆ.

ಈ ನಡುವೆ ಬ್ಯಾಂಕಿನ 1,576 ಸಾಲದ ಖಾತೆಗಳ ಪೈಕಿ ಶೇ.78 ಸಾಲಗಳಿಗೆ ಸೂಕ್ತ ದಾಖಲೆಗಳು ಇಲ್ಲ ಎಂಬ ಸತ್ಯ ಬಯಲಾಗಿದೆ. ಸುಮಾರು 24 ಮುಖ್ಯ ಫಲಾನುಭವಿಗಳಿಗೆ (ಸಾಲಗಾರರಿಗೆ) 892 ಕೋಟಿ ರೂ. ಸಾಲ ಮಂಜೂರು ಮಾಡಿ ಆ ನಂತರ ಬ್ಯಾಂಕ್ ಮುಖ್ಯಸ್ಥರು ಹಣ ದುರುಪಯೋಗಪಡಿಸಿ ಕೊಂಡಿದ್ದಾರೆ. ಅಲ್ಲದೆ 1,576 ಸಾಲದ ಖಾತೆಗಳ ಪೈಕಿ 1,224 ಖಾತೆಗಳಿಗೆ ಸಂಬಂಧಪಟ್ಟಂತೆ ದಾಖಲೆಗಳು ಕಡತಗಳು ಇಲ್ಲದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಠೇವಣಿ ಇಲ್ಲದಿದ್ದರೂ ಠೇವಣಿ ಇದೆ ಎಂದು ಸಾಲ ಮಂಜೂರು ಹಾಗೂ ಠೇವಣಿದಾರರ ಒಪ್ಪಿಗೆ ಸಹಿ ಪಡೆಯದೆ ಅವರ ಹೆಸರಿನಲ್ಲಿ ಸಾಲ ನೀಡಲಾಗಿದೆ.

ಈ ಮೂಲಕ ಆದಾಯ ಗುರುತಿಸುವಿಕೆ ಹಾಗೂ ಆಸ್ತಿ ವರ್ಗೀಕರಣ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಜತೆಗೆ, ಬ್ಯಾಂಕ್‍ನಲ್ಲಿ 40,661 ಗ್ರಾಹಕರಿದ್ದು, ಒಟ್ಟು 231 ಕೋಟಿ ರೂ. ಠೇವಣಿ ಇಟ್ಟಿದ್ದಾರೆ. ಸಿಐಡಿ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಗ್ರಾಹಕರಿಗೆ ತೊಂದರೆ ಉಂಟಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News