'ಬೇಟಿ ಬಚಾವೊ' ಬಗ್ಗೆ ಪ್ರಧಾನಿ ಈಗ ಏಕೆ ಮಾತನಾಡುತ್ತಿಲ್ಲ: ಡಿ.ಕೆ ಶಿವಕುಮಾರ್ ಪ್ರಶ್ನೆ

Update: 2020-10-01 16:39 GMT

ಬೆಂಗಳೂರು, ಅ.1: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಗುರುವಾರ ರಾತ್ರಿ ಪ್ರತಿಭಟನೆ ನಡೆಸಿದರು.

ಇಲ್ಲಿನ ರೇಸ್‍ಕೋರ್ಸ್ ಕಾಂಗ್ರೆಸ್ ಭವನದಿಂದ ಮೌರ್ಯ ವೃತ್ತದ ಗಾಂಧಿ ಪ್ರತಿಮೆವರೆಗೂ ಪಂಜಿನ ಮೆರವಣಿಗೆ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೇರಿದಂತೆ ಪ್ರಮುಖರು, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಉತ್ತರಪ್ರದೇಶದ ಪೊಲೀಸರು ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವುದು ಖಂಡನೀಯ. ಈ ಇಬ್ಬರು ನಾಯಕರ ಬಂಧನ ಮತ್ತು ಅವರ ಜೊತೆಗಿನ ಪೊಲೀಸರ ದುರ್ವರ್ತನೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬೆಲೆ ತೆರಬೇಕಾಗುತ್ತದೆ ಎಂದು ಪ್ರತಿಭಟನಾ ನಿರತ ನಾಯಕರು ಹೇಳಿದರು.

ಅತ್ಯಾಚಾರ ಸಂತ್ರಸ್ತೆ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿರುವ ನಮ್ಮ ನಾಯಕ ರಾಹುಲ್ ಗಾಂಧಿ ಅವರ ಮೇಲೆ ಉತ್ತರ ಪ್ರದೇಶ ಪೊಲೀಸರು ನಡೆಸಿದ ಹಲ್ಲೆಯನ್ನು ನಾನು ಖಂಡಿಸುತ್ತೇನೆ. ಯಾವ ಕಾನೂನಿನಡಿಯಲ್ಲಿ ಅವರನ್ನು ಬಂಧಿಸಲಾಗಿದೆ. ಅಲ್ಲದೆ, 'ಬೇಟಿ ಬಚಾವೊ' ಬಗ್ಗೆ ಪ್ರಧಾನಿ ಈಗ ಏಕೆ ಮಾತನಾಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಖಾರವಾಗಿ ಪ್ರಶ್ನೆ ಮಾಡಿದರು.

ಈ ವೇಳೆ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು, ವಾಹನದಲ್ಲಿ ಕರೆದೊಯ್ದುರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News