ಟ್ರಂಪ್ ಹೇರಿದ್ದ ಎಚ್-1ಬಿ ವೀಸಾ ನಿಷೇಧಕ್ಕೆ ಕೋರ್ಟ್ ತಡೆಯಾಜ್ಞೆ

Update: 2020-10-02 09:20 GMT

ವಾಷಿಂಗ್ಟನ್: ಭಾರತದ ಸಾವಿರಾರು ಐಟಿ ವೃತ್ತಿಪರರಿಗೆ ಸಂತಸ ನೀಡಿದ ಬೆಳವಣಿಗೆಯೊಂದರಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್-1ಬಿ, ಎಲ್-1 ಮತ್ತಿತರ ನಾನ್-ಇಮ್ಮಿಗ್ರೆಂಟ್ ವೀಸಾ ಹೊಂದಿದವರು ದೇಶ ಪ್ರವೇಶಿಸುವುದರ ವಿರುದ್ಧ ಹೇರಿದ್ದ ತಾತ್ಕಾಲಿಕ ನಿಷೇಧಕ್ಕೆ ಅಲ್ಲಿನ ಫೆಡರಲ್ ನ್ಯಾಯಾಲಯ ಗುರುವಾರ ತಡೆಯಾಜ್ಞೆ ನೀಡಿದೆಯಲ್ಲದೆ ಅಧ್ಯಕ್ಷರು ತಮ್ಮ ಸಂವಿಧಾನಿಕ ಅಧಿಕಾರವನ್ನು ಮೀರಿದ್ದಾರೆಂದು ಹೇಳಿದೆ.

ಅಮೆರಿಕಾದ ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಧೀಶ ಜೆಫ್ರಿ ವೈಟ್ ಅವರು ಹೊರಡಿಸಿರುವ ಈ ಆದೇಶವು  ವಾಣಿಜ್ಯ ಮತ್ತು ಆಂತರಿಕ ರಕ್ಷಣಾ ಇಲಾಖೆ ವಿರುದ್ಧ  ಅಪೀಲು ಸಲ್ಲಿಸಿದ್ದ ಯುಎಸ್ ಚೇಂಬರ್ ಆಫ್ ಕಾಮರ್ಸ್, ನ್ಯಾಷನಲ್ ಅಸೋಸಿಯೇಶನ್ ಆಫ್ ಮ್ಯಾನುಫ್ಯಾಕ್ಚರರ್ಸ್, ನ್ಯಾಷನಲ್ ರಿಟೇಲ್ ಫೆಡರೇಶನ್, ಟೆಕ್ ನೆಟ್,  ಇಂಟ್ರಾಕ್ಸ್ ಇಂಕ್  ಇವುಗಳ ಸದಸ್ಯರಿಗೆ ಅನ್ವಯವಾಗುತ್ತವೆ. ಈ ಸಂಘಟನೆಗಳು ಹಲವಾರು ದೊಡ್ಡ ಸಂಸ್ಥೆಗಳಾದ ಫೇಸ್ ಬುಕ್, ಗೂಗಲ್ ಹಾಗೂ ಉಬರ್ ಇವುಗಳನ್ನು  ಪ್ರತಿನಿಧಿಸುತ್ತವೆ ಹಾಗೂ ಈ ತೀರ್ಪಿನ ಲಾಭ ಪಡೆಯಲು ಇತರ  ಸಂಸ್ಥೆಗಳಿಗೂ  ಮೇಲೆ ತಿಳಿಸಿದ ಸಂಘಟನೆಗಳ ಭಾಗವಾಗಲು ಯಾವುದೇ ಅಡ್ಡಿಯಿಲ್ಲ ಎಂದು ತಿಳಿದು ಬಂದಿದೆ. ಮೇಲೆ ತಿಳಿಸಿದ ಸಂಘಟನೆಗಳ ಹೊರತಾಗಿ ಮೈಕ್ರೋಸಾಫ್ಟ್ ಹಾಗೂ ಅಮೆಝಾನ್ ಕೂಡ ಅಫಿಡವಿಟ್ ಸಲ್ಲಿಸಿ ಟ್ರಂಪ್ ಅವರು ಹೇರಿರುವ ವೀಸಾ ನಿಷೇಧ ಹೇಗೆ ತಮ್ಮ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಿದ್ದವು.

ನ್ಯಾಯಾಲಯ ವಿಧಿಸಿದ ತಡೆಯಾಜ್ಞೆ ತಕ್ಷಣಕ್ಕೆ ಜಾರಿ ಬರುತ್ತದೆ ಹಾಗೂ ಬಾಕಿ ವಿಚಾರಣೆ ಪೂರ್ಣಗೊಳ್ಳುವ ತನಕ ಅಥವಾ ನ್ಯಾಯಾಲಯ ಮುಂದಿನ ಆದೇಶ ನೀಡುವ ತನಕ ಊರ್ಜಿತದಲ್ಲಿರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News