ಗಾಂಧೀಜಿ ಆದರ್ಶಗಳನ್ನು ಅಳವಡಿಸಿಕೊಂಡಿರುವ ಮೋದಿ ಸರಕಾರ: ನಳೀನ್ ಕುಮಾರ್ ಕಟೀಲು

Update: 2020-10-02 12:00 GMT

ಬೆಂಗಳೂರು, ಅ. 2: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ನಗರದ ಮಲ್ಲೇಶ್ವರದ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಚ್ಛ ಭಾರತ, ಗ್ರಾಮ ಸಡಕ್‍ನಂತಹ ಉತ್ತಮ ಯೋಜನೆಗಳ ಅನುಷ್ಠಾನದ ಮೂಲಕ ಈಗಿನ ಕೇಂದ್ರ ಸರಕಾರ ಗಾಂಧೀಜಿ ಅವರ ಚಿಂತನೆಗಳನ್ನು ಅಳವಡಿಸಿಕೊಂಡಿದೆ ಎಂದರು.

ಸ್ವಾಮಿ ವಿವೇಕಾನಂದರ `ಭಾರತ ವಿಶ್ವಗುರು' ಎಂಬ ಮಹಾನ್ ಪರಿಕಲ್ಪನೆ ಜಾರಿಗೊಳಿಸಲು ಶ್ರಮಿಸುತ್ತಿದೆ. ದೇಶಕ್ಕಾಗಿ ವಾರದ ಎಲ್ಲ ದಿನಗಳಲ್ಲಿ ಒಂದು ಹೊತ್ತಿನ ಊಟ ಬಿಡಿ ಎಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಕರೆ ನೀಡಿದ್ದರು. ಅವರು ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಹೊಂದಿದ್ದರು. 70 ವರ್ಷ ಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಗಾಂಧೀಜಿ ಚಿಂತನೆ ಮತ್ತು ಆದರ್ಶಗಳನ್ನು ಅಳವಡಿಸಿಕೊಂಡಿರಲಿಲ್ಲ ಎಂದು ಕಟೀಲು ಟೀಕಿಸಿದರು.

ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಸಂಸದ ಪ್ರತಾಪ್ ಸಿಂಹ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ತೆಂಗಿನಕಾಯಿ, ಸಿದ್ದರಾಜು, ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News