×
Ad

'ಮಾರೋ ಜವಾನ್ ಮಾರೋ ಕಿಸಾನ್' ಪ್ರಧಾನಿ ಮೋದಿಯ ಹೊಸ ಘೋಷಣೆ: ಮಲ್ಲಿಕಾರ್ಜುನ ಖರ್ಗೆ

Update: 2020-10-02 18:01 IST

ಬೆಂಗಳೂರು, ಅ.2: ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆಯಾದರೂ, ಸಾಮಾಜಿಕ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ವೇಳೆ ಮಾತನಾಡಿದ ಅವರು, ಯುಪಿಯಲ್ಲಿ ಮಹಿಳೆ, ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಸಾಮಾಜಿಕ ನ್ಯಾಯಕ್ಕಾಗಿಯೇ ರಾಹುಲ್, ಪ್ರಿಯಾಂಕಾ ಅಲ್ಲಿಗೆ ಹೋಗಿದ್ದರು. ಅವರನ್ನು ಹೇಗೆ ನಡೆಸಿಕೊಂಡರು ಎಂಬುದು ತಿಳಿದಿದೆ ಎಂದರು.

ಒಬ್ಬ ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆಗೈದರು. ಕೊಲೆಗಡುಕರಿಗೆ ಅಲ್ಲಿ ಮರ್ಯಾದೆ ನೀಡಿದರು. ಬಲಿಯಾದ ಯುವತಿಯ ಕುಟುಂಬಕ್ಕೆ ಸಾಂತ್ವನ ಹೇಳಲು ರಾಹುಲ್, ಪ್ರಿಯಾಂಕಾ ಗಾಂಧಿ ಹೊರಟಿದ್ದರು. ಆದರೆ ಅವರ ಜೊತೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಬಂದ ಮೇಲೆಯೇ ದೌರ್ಜನ್ಯ ಹೆಚ್ಚಾಗುತ್ತಿದೆ. ಆದರೂ, ಪ್ರಧಾನಿ ಮೋದಿ ಈ ಬಗ್ಗೆ ಬಾಯಿ ಬಿಟ್ಟು ಮಾತನಾಡುತ್ತಿಲ್ಲ. ಇದು ದೊಡ್ಡಮಟ್ಟಕ್ಕೆ ಹೋದ ಮೇಲೆ ಟ್ವೀಟ್ ಮಾಡುತ್ತಾರೆ. ಆರೆಸ್ಸೆಸ್‍ಗೆ ಇದೇ ಬೇಕು. ಜಾತಿ ಜಾತಿಗಳನ್ನು ಒಡೆದು ಆಳೋಕೆ ಹೊರಟಿದ್ದಾರೆ. ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಇತ್ತೀಚೆಗೆ ರೈತರ ಮೇಲೂ ದೌರ್ಜನ್ಯ ಮಾಡುತ್ತಿದ್ದಾರೆ. ಕಾರ್ಮಿಕರ ಮೇಲೂ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರಕಾರ ರೈತ ವಿರೋಧಿ ಕಾನೂನುಗಳನ್ನ ತಂದಿವೆ. ನೋಟ್ ಬ್ಯಾನ್ ಮಾಡಿ ಆರ್ಥಿಕ ಪರಿಸ್ಥಿತಿ ಹದಗೆಡಿಸಿದರು. ಲಾಕ್‍ಡೌನ್ ಮಾಡಿ ಕಾರ್ಮಿಕರನ್ನು ಮೂರಾಬಟ್ಟೆ ಮಾಡಿದರು. ಇಂದಲ್ಲ ನಾಳೆ ಜನ ರೊಚ್ಚಿಗೇಳ್ತಾರೆ. ಇದನ್ನ ಬಿಜೆಪಿ ನಾಯಕರು ಅರಿತುಕೊಳ್ಳಬೇಕು ಎಂದು ಕಿಡಿಕಾರಿದರು.

ಕೇವಲ ದೂಷಣೆಯಲ್ಲೇ ಬಿಜೆಪಿಯವರು ತೊಡಗಿದ್ದಾರೆ. ಅಧಿಕಾರ, ಹಣದ ಅಹಂ ಅವರ ನೆತ್ತಿಗೇರಿದೆ. ಅದಕ್ಕೆ ಅವರು ಯಾವ ಯೋಜನೆಯೂ ಜಾರಿಗೆ ತರುತ್ತಿಲ್ಲ. ಅಭಿವೃದ್ಧಿಯನ್ನೇ ಅವರು ಮರೆತುಬಿಟ್ಟಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.

ಮಾರೋ ಜವಾನ್ ಮಾರೋ ಕಿಸಾನ್

ಚಂಪಾರಣ್ ಚಳುವಳಿಯನ್ನು ರೈತರು ಬೆಂಬಲಿಸಿದ್ದರು. ಅದಕ್ಕೇ ರೈತರನ್ನು ತುಳಿಯೋಕೆ ಮೋದಿ ಹೊರಟಿದ್ದಾರೆ. ದುಷ್ಟರ ಕೈಯಲ್ಲಿಂದು ಅಧಿಕಾರ ಸಿಕ್ಕಿದೆ. ಜೈ ಜವಾನ್ ಜೈ ಕಿಸಾನ್ ಮರೆಯಾಗಿದ್ದು, ಮಾರೋ ಜವಾನ್ ಮಾರೋ ಕಿಸಾನ್ ಪ್ರಾರಂಭವಾಗಿದ್ದು, ಇದು ಪ್ರಧಾನಿ ಮೋದಿಯ ಹೊಸ ಘೋಷಣೆಯಾಗಿದೆ ಎಂದು ಖರ್ಗೆ ಕಿಡಿಕಾರಿದರು.

ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ಹಲವರ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಇತ್ತೀಚೆಗೆ ಇತಿಹಾಸವನ್ನೇ ಬದಲಾಯಿಸುವ ಕೆಲಸ ನಡೆದಿದೆ. ಸಂವಿಧಾನವನ್ನ ರಕ್ಷಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಉತ್ತರ ಪ್ರದೇಶದಲ್ಲಿ ರಾಹುಲ್, ಪ್ರಿಯಾಂಕಾ ಗಾಂಧಿ ಮೇಲಿನ ಪೊಲೀಸ್ ದೌರ್ಜನ್ಯ ನೋಡಿದ್ದೇವೆ. ಇನ್ನು ಜನಸಾಮಾನ್ಯರ ಗತಿಯೇನಾಗಬಹುದು? ಮತ್ತೊಮ್ಮೆ ದೇಶ ಎದ್ದೇಳಬೇಕಿದೆ. ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಿದೆ. ಎಲ್ಲಾ ಪಕ್ಷಗಳು ಹೋರಾಟಕ್ಕೆ ಮುಂದಾಗಬೇಕಿದೆ. ಗಾಂಧೀಜಿಯವರಿಂದ ಸ್ಫೂರ್ತಿ ಪಡೆದು ಹೋರಾಡಬೇಕಾಗುತ್ತದೆ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಎಂ.ನಾರಾಯಣಸ್ವಾಮಿ, ಪರಿಷತ್ ಸದಸ್ಯರಾದ ನಜೀರ್ ಅಹಮದ್, ಯು.ಬಿ.ವೆಂಕಟೇಶ್, ವಿ.ಎಸ್.ಉಗ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News