ಮಹಾತ್ಮ ಗಾಂಧಿ ನಮ್ಮ ಸರಕಾರದ ಯೋಜನೆಗಳಿಗೆ ಪ್ರೇರಕ ಶಕ್ತಿ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-10-02 14:20 GMT

ಬೆಂಗಳೂರು, ಅ.2: ಸತ್ಯ ಮತ್ತು ಅಹಿಂಸೆಯಿಂದ ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ ಗಾಂಧೀಜಿಯವರ ಜನ್ಮ ದಿನವನ್ನು ಅಹಿಂಸಾ ದಿನವನ್ನಾಗಿ ಆಚರಿಸುತ್ತಿದ್ದೇವೆ. ಗಾಂಧೀಜಿ ‘ನನ್ನ ಜೀವನವೇ ನನ್ನ ಸಂದೇಶ’ ಎಂದು ಹೇಳಿದ್ದಾರೆ. ಅವರ ನಡೆ, ನುಡಿಯಲ್ಲಿ ಭಿನ್ನತೆ ಇರಲಿಲ್ಲ. ಅಹಿಂಸೆಯ ತತ್ವಗಳ ಮೂಲಕ ಜಗತ್ತಿನ ಚರಿತ್ರೆಯಲ್ಲಿ ಗಾಂಧಿ ಸದಾ ಪ್ರಸ್ತುತ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶುಕ್ರವಾರ ಮಹಾತ್ಮ ಗಾಂಧೀಜಿಯವರ 151ನೆ ಜನ್ಮದಿನದ ಅಂಗವಾಗಿ ವಿಧಾನಸೌಧ ಹಾಗೂ ವಿಕಾಸಸೌಧದ ನಡುವೆ ಇರುವ ಗಾಂಧೀಜಿಯವರ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಬಳಿಕ ಮುಖ್ಯಮಂತ್ರಿ ಮಾತನಾಡಿದರು.

ಸಮಾಜದಲ್ಲಿನ ದೀನ ದಲಿತರ, ಶೋಷಿತರ ವರ್ಗದ ಅಭ್ಯುದಯದ ಕನಸನ್ನು ಗಾಂಧೀಜಿ ಕಂಡಿದ್ದರು. ಶ್ರಮ ಸಂಸ್ಕೃತಿ, ಸರಳ ಜೀವನ ಮಾರ್ಗವನ್ನು ಗಾಂಧೀಜಿಯವರು ಅನುಸರಿಸಿದರು. ರೈತರ ಸ್ವಾವಲಂಬಿ ಬದುಕು, ಗುಡಿ ಕೈಗಾರಿಕೆಗೆ ಒತ್ತು ನೀಡುವುದರಿಂದ ಗ್ರಾಮೀಣ ಜನರ ಶ್ರೇಯೋಭಿವೃದ್ಧಿ ಸಾಧ್ಯ ಎಂದು ಗಾಂಧೀಜಿ ನಂಬಿದ್ದರು ಎಂದು ಯಡಿಯೂರಪ್ಪ ಹೇಳಿದರು.

ಮಹಾತ್ಮ ಗಾಂಧಿ ಅವರು ಸ್ವಚ್ಛತೆಗೆ ಆದ್ಯತೆ ನೀಡಲು ಕರೆ ನೀಡಿದ್ದರು. ನಾವೆಲ್ಲರೂ ಸ್ವಚ್ಛ ಭಾರತದ ಅಭಿಯಾನಕ್ಕೆ ಕೈ ಜೋಡಿಸುವ ಮೂಲಕ ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಮಹಾತ್ಮ ಗಾಂಧಿ ನಮ್ಮ ಸರಕಾರದ ಹಲವಾರು ಯೋಜನೆಗಳಿಗೆ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ಧಾರ್ಮಿಕ ಸಹಿಷ್ಣುತೆ, ಪರಿಸರ ಸಂರಕ್ಷಣೆ, ಗ್ರಾಮಗಳ ಸಬಲೀಕರಣ, ಸುಸ್ಥಿರ ಅಭಿವೃದ್ಧಿ, ಸಮಾನತೆ, ಸ್ವಚ್ಛತೆ, ಶ್ರಮಶಕ್ತಿಗೆ ಗೌರವ ಸೇರಿದಂತೆ ನಮ್ಮೆಲ್ಲ ಪ್ರಮುಖ ಯೋಚನೆ, ಯೋಜನೆಗಳಲ್ಲಿ ಗಾಂಧಿ ಚಿಂತನೆಗಳಿವೆ. ಗಾಂಧೀಜಿಯವರ ಸರ್ವೋದಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸರಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಹಾತ್ಮ ಗಾಂಧೀಜಿ ಅವರ ಬದುಕು ಮತ್ತು ಸಾಧನೆಗಳು ನಿರಂತರ ನಮಗೆ ಪ್ರೇರಣೆಯಾಗಿ ಉಳಿಯಲಿ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನದ ಅಂಗವಾಗಿ ಅವರ ಪ್ರತಿಮೆ ಬಳಿಯೂ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಶಾಸಕ ಸಿದ್ದು ಸವದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News