ಸಂಪನ್ಮೂಲ ಕ್ರೋಡೀಕರಣಕ್ಕಾಗಿ 324 ಆಸ್ತಿಗಳನ್ನು ಮಾರಾಟಕ್ಕಿಟ್ಟ ಬಿಬಿಎಂಪಿ
ಬೆಂಗಳೂರು, ಅ.2: ಬಿಬಿಎಂಪಿಯು ಸಂಪನ್ಮೂಲ ಕ್ರೋಡೀಕರಣಕ್ಕಾಗಿ ವಾಣಿಜ್ಯ ಉದ್ದೇಶಕ್ಕಾಗಿ ಗುತ್ತಿಗೆ ನೀಡಲಾಗಿರುವ 4,554 ಕೋಟಿ ರೂ. ಮೌಲ್ಯದ 324 ಆಸ್ತಿಗಳನ್ನು ಗುತ್ತಿಗೆದಾರರಿಗೆ ಮಾರಾಟ ಮಾಡಲು ಬಿಬಿಎಂಪಿ ನಿರ್ಧರಿಸಿದೆ.
ಕೊರೋನ ಲಾಕ್‍ಡೌನ್ ಆರ್ಥಿಕ ಸಂಕಷ್ಟದ ಪರಿಹಾರಕ್ಕಾಗಿ ರಾಜ್ಯ ಸರಕಾರ ಜಾರಿಗೆ ತಂದಿರುವ ಯೋಜನೆಯನ್ನು ಬಿಬಿಎಂಪಿಗೂ ವಿಸ್ತರಣೆ ಮಾಡಿ ಗುತ್ತಿಗೆ ಆಸ್ತಿಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ತೀರ್ಮಾನಿಸಿದೆ.
ಬಿಬಿಎಂಪಿ ವಾಣಿಜ್ಯ ಉದ್ದೇಶಕ್ಕಾಗಿ ನೀಡಲಾದ ಆಸ್ತಿಗಳನ್ನು ಮಾತ್ರ ಮಾರಾಟ ಮಾಡಲು ಬಿಬಿಎಂಪಿ ತೀರ್ಮಾನಿಸಿದ್ದು, ಉಳಿದಂತೆ ಶೈಕ್ಷಣಿಕ ಉದ್ದೇಶಕ್ಕಾಗಿ, ಸರಕಾರಿ ಇಲಾಖೆಗಳಿಗೆ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ನೀಡಿರುವ ಗುತ್ತಿಗೆಯನ್ನು ಮುಂದುವರಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಗುತ್ತಿಗೆ ಆಧಾರದ ಮೇಲೆ ಆಸ್ತಿ ಪಡೆದಿರುವ ಗುತ್ತಿಗೆದಾರರಿಗೆ ಪ್ರಸ್ತುತ ಮಾರ್ಗಸೂಚಿ ದರದಲ್ಲಿ ಮಾರಾಟ ಮಾಡಿ ಸೇಲ್‍ಡೀಡ್ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.
ಈಗಾಗಲೇ ಅತ್ಯಂತ ಕಡಿಮೆ ಬೆಲೆಗೆ ಬಿಬಿಎಂಪಿ ಆಸ್ತಿಯನ್ನು ಗುತ್ತಿಗೆ ಪಡೆದು ಕೆಲವರು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ಆಸ್ತಿ ವರ್ಗಾಯಿಸಿಕೊಂಡು ಪಾಲಿಕೆ ಬೊಕ್ಕಸಕ್ಕೆ ಕೋಟ್ಯಂತರ ರೂ. ವಂಚನೆ ಮಾಡಿದ್ದಾರೆ. ಈ ರೀತಿ ವಂಚನೆ ಮಾಡಿರುವ ಆಸ್ತಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದರ ಜತೆಗೆ ವಾಣಿಜ್ಯ ಉದ್ದೇಶಕ್ಕಾಗಿ ನೀಡಿರುವ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಆರ್ಥಿಕ ಸಂಕಷ್ಟ ಎದುರಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.