ಸಂಪುಟ ವಿಸ್ತರಣೆ: ವರಿಷ್ಠರ ಭೇಟಿಗೆ ಅನುಮತಿ ಸಿಕ್ಕ ಕೂಡಲೇ ಹೊಸದಿಲ್ಲಿಗೆ- ಸಿಎಂ ಯಡಿಯೂರಪ್ಪ

Update: 2020-10-02 15:16 GMT

ಬೆಂಗಳೂರು, ಅ. 2: ಸಚಿವ ಸಂಪುಟ ವಿಸ್ತರಣೆ ಸಂಬಂಧ ಪಕ್ಷದ ವರಿಷ್ಠರ ಭೇಟಿಗೆ ಸಮಯ ಕೇಳಿದ್ದು, ಅವರ ಅನುಮತಿ ಸಿಕ್ಕ ಕೂಡಲೇ ಹೊಸದಿಲ್ಲಿಗೆ ತೆರಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಪಟ್ಟಂತೆ ಹೈಕಮಾಂಡ್ ಜೊತೆ ಚರ್ಚಿಸಲು ದಿಲ್ಲಿಗೆ ತೆರಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಿರಿಯ ಮುಖಂಡರ ಭೇಟಿಗೆ ಸಮಯ ಕೋರಿದ್ದು, ಅವರ ಅನುಮತಿ ಸಿಕ್ಕಿದ ಬಳಿಕ ದಿಲ್ಲಿಗೆ ತೆರಳುವೆ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಸಂಪುಟಕ್ಕೆ ಯಾರನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂಬುದು ಸೇರಿದಂತೆ ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ವರಿಷ್ಠರ ಕರೆ ಬಂದ ನಂತರ ಹೊಸದಿಲ್ಲಿಗೆ ಹೋಗಿ ಚರ್ಚಿಸಿ, ಆ ಬಳಿಕವೆ ಈ ಬಗ್ಗೆ ತೀರ್ಮಾನ ಮಾಡಲಾಗುವುದು. ಈಗ ಸದ್ಯಕ್ಕೆ ಈ ಬಗ್ಗೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ ಎಂದು ನಿರಾಕಸಿದರು.

ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಮತ್ತು ವಿಧಾನ ಪರಿಷತ್‍ನ ನಾಲ್ಕು ಸ್ಥಾನಗಳಿಗೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುವ ಸಾಧ್ಯತೆ ಇದೆ. ಆ ಹಿನ್ನೆಲೆಯಲ್ಲಿ ಸಿಎಂ ಬಿಎಸ್‍ವೈ ಅವರು ತಮ್ಮ ಹೊಸದಿಲ್ಲಿ ಭೇಟಿಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.

ಇತ್ತೀಚೆಗಷ್ಟೇ ದಿಲ್ಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ, ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದರು. ಕೋವಿಡ್-19 ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಮಿತ್ ಶಾ ಅವರ ಭೇಟಿ ಸಾಧ್ಯವಾಗಿರಲಿಲ್ಲ. ಇದೀಗ ಉಪ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ಮುಂದೂಡಲ್ಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News