ಕುರುಬ ಸಮುದಾಯ ಎಸ್ಟಿಗೆ ಸೇರ್ಪಡೆ ಮಾಡಲು ಕೇಂದ್ರದ ಮೇಲೆ ಒತ್ತಡ ಹೇರಲು ತೀರ್ಮಾನ

Update: 2020-10-02 15:30 GMT

ಬೆಂಗಳೂರು, ಅ. 2: ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಕುರುಬ ಸಮುದಾಯಕ್ಕೆ ಸೂಕ್ತ ಮೀಸಲಾತಿ ಕಲ್ಪಿಸುವ ದೃಷ್ಟಿಯಿಂದ ಈ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರ್ಪಡೆ ಮಾಡಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ತೀರ್ಮಾನಿಸಲಾಗಿದೆ.

ಶುಕ್ರವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸಂಘಟನೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಮುದಾಯದ ಮುಖಂಡರು ಮೇಲ್ಕಂಡ ತೀರ್ಮಾನ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟದ ಮೂಲಕ ಕುರುಬ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಒತ್ತಾಯಿಸಲಾಗುವುದು ಎಂದು ತಿಳಿಸಲಾಗಿದೆ.

ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ದೇಶದಲ್ಲಿ 12 ಕೋಟಿಗೂ ಅಧಿಕ ಮಂದಿ ಕುರುಬ ಸಮುದಾಯವರಿದ್ದು, ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿನಲ್ಲಿ ಈ ಸಮುದಾಯವನ್ನು ಗುರುತಿಸಲಾಗುತ್ತಿದೆ. ವೈಯಕ್ತಿಯ ಹಿತವನ್ನು ಬದಿಗಿಟ್ಟು ಸಮುದಾಯದ ಶ್ರೇಯೋಭಿವೃದ್ದಿಗಾಗಿ ಎಲ್ಲರೂ ಒಗ್ಗೂಡಿ ಹೋರಾಟ ರೂಪಿಸಬೇಕು ಎಂದು ಸಲಹೆ ಮಾಡಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಇಂದು ಕುರುಬ ಸಮಾಜವನ್ನು ಒಗ್ಗಟ್ಟಾಗಿಸುವ ಉತ್ತಮ ಕಾರ್ಯಕ್ರಮವಾಗಿದೆ. ಅನೇಕ ಉತ್ತಮ ಕೆಲಸಗಳು ಈ ಸಂಘಟನೆಯಿಂದ ಆಗಿವೆ. ಕುರುಬ ಸಮಾಜವನ್ನು ಜಾಗೃತಿಗೊಳಿಸಲು, ಅಭಿವೃದ್ಧಿಯ ಕಡೆಗೆ ತೆಗೆದುಕೊಂಡು ಹೋಗಲು ಈ ರೀತಿಯ ಕಾರ್ಯಕ್ರಮಗಳು ಅಗತ್ಯವಾಗಿವೆ. ಈ ಸಮಾಜದ ವಿದ್ಯಾವಂತ ಯುವಕರು ಕೆಎಎಸ್, ಐಎಎಸ್ ಅಧಿಕಾರಿಗಳಾಗಲು ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಲು ನಮ್ಮ ಸಂಘ ತನ್ನದೆಯಾದ ಪ್ರಯತ್ನ ನಡೆಸುತ್ತದೆ ಎಂದು ಹೇಳಿದರು.

ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ, ವಿಧಾನ ಪರಿಷತ್ ಸದಸ್ಯ ಆರ್. ಶಂಕರ್, ಆಂಧ್ರಪ್ರದೇಶದ ಶಾಸಕಿ ಉಷಾಶ್ರೀ ಚರಣ್, ತೆಲಂಗಾಣ ವಿಧಾನ ಪರಿಷತ್ ಸದಸ್ಯ ಎಗ್ಗೆ ಮಲ್ಲೇಶಂ, ಮಹಾರಾಷ್ಟ್ರದ ಗೋಪಿಚಂದ್ ಬದಲ್ಕರ್, ಸಂಸದ ವಿಕಾಸ್ ಮಹಾತ್ಮೆ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News