×
Ad

ದಲಿತ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ: ಆದಿತ್ಯನಾಥ್ ಸರಕಾರ ವಜಾಕ್ಕೆ ಬಿಎಸ್ಪಿ ಪಟ್ಟು

Update: 2020-10-03 16:51 IST

ಬೆಂಗಳೂರು, ಅ.3: ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ನಡೆದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ, ಕೊಲೆ ಖಂಡಿಸಿ ಬಿಎಸ್ಪಿ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿ, ಯೋಗಿ ಆದಿತ್ಯ ನಾಥ್ ಸರಕಾರ ವಜಾಗೊಳಿಸುವಂತೆ ಆಗ್ರಹಿಸಿದರು.

ಶನಿವಾರ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಜಮಾಯಿಸಿದ ಬಿಎಸ್ಪಿ ಪಕ್ಷದ ನೂರಾರು ಸದಸ್ಯರು, ಕೇಂದ್ರ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ಕೆಳ ವರ್ಗಕ್ಕೆ ಸೇರಿದ ಯುವತಿಯ ಮೇಲೆ ಬಲಾತ್ಕಾರ ಮಾಡಿ ಆಕೆಯ ಹತ್ಯೆ ಮಾಡಲಾಗಿದೆ. ಈ ಪೈಶಾಚಿಕ ಕೃತ್ಯ ಎಸಗಿದ ನಾಲ್ವರು ಕಾಮುಕರು ಘಟನೆ ನಡೆದ ನಂತರವೂ ಯಾವುದೇ ಅಳುಕಿಲ್ಲದೆ ಸ್ವತಂತ್ರವಾಗಿ ಓಡಾಡಿಕೊಂಡಿರುವುದು ನಾಗರಿಕ ಸಮಾಜಕ್ಕೆ ಆಘಾತ ಉಂಟು ಮಾಡಿದೆ ಎಂದು ಹೇಳಿದರು.

ಈ ಘಟನೆ ಇಡೀ ಸಮಾಜ ತಲೆತಗ್ಗಿಸುವಂತಾಗಿದೆ. ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿರುವ ಯುವತಿ ಸಾವಿಗೆ ನ್ಯಾಯ ಸಿಗಬೇಕು. ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಲ್ಲದೆ, ತೆಲಂಗಾಣದಲ್ಲಿ ಕೆಲ ತಿಂಗಳ ಹಿಂದೆ ನಡೆದ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ಈ ಘಟನೆಯಲ್ಲಿ ಶಾಮಿಲಾದವರನ್ನು ಕೂಡ ಅದೇ ರೀತಿ ಎನ್‍ಕೌಂಟರ್ ಅಥವಾ ಗಲ್ಲಿಗೆ ಏರಿಸಬೇಕು. ಆಗ ಯಾರೊಬ್ಬರೂ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲು ಮುಂದಾಗುವುದಿಲ್ಲ. ದೇಶದಲ್ಲಿ ಮಹಿಳೆಯರು, ಅದರಲ್ಲೂ ದಲಿತರು ಸುರಕ್ಷಿತವಾಗಿಲ್ಲ. ದೇಶದ ಎಲ್ಲ ರಾಜ್ಯ ಸರ್ಕಾರಗಳು, ಪೊಲೀಸ್ ಅಧಿಕಾರಿಗಳು ಕನಿಷ್ಠ ಮಾನವೀಯತೆಯಿಂದ ವರ್ತಿಸಿ, ಎಲ್ಲಾ ಮಹಿಳೆಯರಿಗೂ ಸುರಕ್ಷತೆ ಒದಗಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News