ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ; 55 ಸಾವಿರ ಪ್ರಕರಣ ದಾಖಲು

Update: 2020-10-03 15:03 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.3: ಬೆಂಗಳೂರು ನಗರ ಸಂಚಾರ ಪೊಲೀಸರು ಸೆ.20ರಿಂದ 26ರವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ 55,717 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬೆಳಕಿಗೆ ಬಂದಿದ್ದು, ಈ ಸಂಬಂಧ 2,35,33,100 ರೂ.ದಂಡ ವಸೂಲಿ ಮಾಡಿದ್ದಾರೆ.

ಕೋವಿಡ್-19 ಕಾರಣದಿಂದಾಗಿ ಚಾಲಕರನ್ನು ಭೌತಿಕವಾಗಿ ತಡೆದು ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳನ್ನು ದಾಖಲು ಮಾಡುವ ಪದ್ಧತಿಯನ್ನು ಕಳೆದ ಮಾರ್ಚ ತಿಂಗಳಿಂದ ತಾತ್ಕಾಲಿಕವಾಗಿ  ನಿರ್ಬಂಧಿಸಲಾಗಿತ್ತು.

ಲಾಕ್‍ಡೌನ್ ಸಡಿಲಿಕೆಯ ನಂತರ ವಾಹನ ಓಡಾಟ ಹೆಚ್ಚಾದಂತೆ ಸಂಚಾರ ನಿಯಮ ಉಲ್ಲಂಘನೆಯು ಹೆಚ್ಚಾಗಿದ್ದರಿಂದ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿಕೊಂಡು ವಾಹನ ಚಾಲಕರನ್ನು ಭೌತಿಕವಾಗಿ ತಡೆದು ಪ್ರಕರಣಗಳನ್ನು ದಾಖಲಿಸುವ  ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ  ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

ನಿರ್ಲಕ್ಷ್ಯವಾಗಿ ದ್ವಿಚಕ್ರ ವಾಹನ ಚಾಲನೆಯ 108 ಪ್ರಕರಣದಲ್ಲಿ 66,000 ರೂ.ದಂಡ, ಅತಿವೇಗದ 17 ಪ್ರಕರಣದಲ್ಲಿ 5100 ರೂ., ಕುಡಿದು ವಾಹನ ಚಾಲನೆಯ 4 ಪ್ರಕರಣ, ಡಿಸ್ ಪ್ಲೇ ಇಲ್ಲದೆ ಚಾಲನೆ 2, ಪಾರ್ಕಿಂಗ್ 2,398 ಪ್ರಕರಣದಲ್ಲಿ 7,08,200 ರೂ.,

ಡಿಎಲ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆಯ 394 ಪ್ರಕರಣದಲ್ಲಿ 2,11,000 ರೂ., ಲೈನ್ ಶಿಸ್ತುಪಾಲಿಸದ  480 ಪ್ರಕರಣದಲ್ಲಿ 1,96,900  ರೂ., ಸಮವಸ್ತ್ರ ಧರಿಸದ 273 ಪ್ರಕರಣದಲ್ಲಿ 1,24,600 ರೂ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಂಧಿಸಿದಂತೆ ಒಟ್ಟು 2,35,33,100 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News